ಬೆಂಗಳೂರು: ಸಾರ್ವಜನಿಕರ ಕುಂದು-ಕೊರತೆ ಅಹವಾಲುಗಳಿಗೆ ರಾಜ್ಯ ಸರ್ಕಾರ ಇನ್ಮುಂದೆ ಲಿಖೀತ ಉತ್ತರ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ. ಗುರುವಾರ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಈ ಕುರಿತು ಸೂಚನೆ ನೀಡಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ನೇತೃತ್ವದ ವಿಭಾಗೀಯ ಪೀಠ, ಸಾರ್ವಜನಿಕರು ತಮ್ಮ ಕುಂದು-ಕೊರತೆಗಳಿಗೆ ಪರಿಹಾರ ಕೋರಿ ಸಲ್ಲಿಸುವ ಅಹವಾಲುಗಳನ್ನು ಪರಿಗಣಿಸುವ ಸಂಬಂಧ ರಾಜ್ಯ ಸರ್ಕಾರ ಇನ್ನು ಮುಂದೆ ಲಿಖೀತ ಉತ್ತರ ನೀಡಬೇಕೇ ಹೊರತು ಮೌಖೀಕವಾಗಿ ತಿಳಿಸಬಾರದು ಎಂದು ಅಭಿಪ್ರಾಯಪಟ್ಟಿತು.
ಮಡಿಕೇರಿಯ ಕೊನ್ನಂಜಗೇರಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಮದ್ಯದಂಗಡಿಗೆ ಪರವಾನಗಿ ನೀಡದಿರಲು ಕೊಡಗು ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸುವಂತೆ ಕೋರಿ ಎ.ಎಂ.ಪೂವಯ್ಯ ಹಾಗೂ ಇತರೆ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ನೇತೃತ್ವದ ವಿಭಾಗೀಯಪೀಠ ನಡೆಸಿತು.
ಅರ್ಜಿ ಪರಿಗಣಿಸಿಲ್ಲ:ವಿಚಾರಣೆ ವೇಳೆ ಕೊನ್ನಂಜಗೇರಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 60 ಮೀಟರ್ ಅಂತರದಲ್ಲೇ ಬಿ.ಸಿ.ಸೋಮಯ್ಯ ಎಂಬುವರು ಮದ್ಯದಂಗಡಿ ತೆರೆದಿದ್ದಾರೆ. ಮದ್ಯ ಮಾರಾಟ ಪರವಾನಗಿ ಕೋರಿ ಅವರು ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಶಾಲೆಯ ಪಕ್ಕದಲ್ಲಿ ಮದ್ಯದಂಗಡಿ ತೆರೆಯವುದು ಕಾನೂನು ಬಾಹಿರ.
ಆದ್ದರಿಂದ ಪರವಾನಗಿ ನೀಡದಂತೆ ಅರ್ಜಿದಾರರು ಕೊಡಗು ಜಿಲ್ಲಾಧಿಕಾರಿ ಮತ್ತು ಅಬಕಾರಿ ಆಯುಕ್ತರಿಗೆ ಮನವಿ ಸಲ್ಲಿಸಿದ್ದು, ಈವರೆಗೆ ಪರಿಗಣಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು. ಈ ವೇಳೆ ಸರ್ಕಾರಿ ವಕೀಲರು, ಈವರೆಗೂ ಮದ್ಯದಂಗಡಿಗೆ ಪರವಾನಗಿ ನೀಡಿಲ್ಲ. ಶೀಘ್ರ ಅರ್ಜಿದಾರರ ಮನವಿಯನ್ನು ಪರಿಶೀಲಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರವು ಅರ್ಜಿದಾರರ ಪರವಾನಗಿಯನ್ನು ಯಾವಾಗ ಪರಿಗಣಿಸುತ್ತೀರಾ?
ಎಂಬುದನ್ನು ಖಚಿತವಾಗಿ ತಿಳಿಸಿ ಅದಕ್ಕೆ ಹಿಂಬರಹವನ್ನೂ ನೀಡಬೇಕು. ಮೌಖೀಕವಾಗಿ ಪರಿಗಣಿಸಲಾಗುವುದು ಎಂದರೆ ಸಾಲದು ಎಂದು ಹೇಳುತ್ತಾ, ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಪರಿಹಾರ ಕೋರಿ ಸಲ್ಲಿಸುವ ಅಹವಾಲುಗಳನ್ನು ಪರಿಗಣಿಸುವ ಬಗ್ಗೆ ಸರ್ಕಾರವು ಇನ್ನು ಮುಂದೆ ಲಖೀತವಾಗಿ ಉತ್ತರಿಸಬೇಕು. ಆ ಬಗ್ಗೆ ಹಿಂಬರಹ ನೀಡಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಡಿ.5ಕ್ಕೆ ಮುಂದೂಡಿತು.