Advertisement

ಚುನಾವಣಾ ಅಕ್ರಮ: ಈಶ್ವರ್‌ ಖಂಡ್ರೆಗೆ ಹೈಕೋರ್ಟ್‌ ನೋಟಿಸ್‌

06:00 AM Oct 26, 2018 | Team Udayavani |

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಕಷ್ಟು ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಬೀದರ್‌ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರಿಗೆ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೆ ಆದೇಶಿಸಿದೆ.

Advertisement

ಈ ಸಂಬಂಧ ಬಿಜೆಪಿ ಪರಾಜಿತ ಅಭ್ಯರ್ಥಿ ಡಿ.ಕೆ. ಸಿದ್ರಾಮ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್‌.ಎನ್‌. ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈಶ್ವರ್‌ ಖಂಡ್ರೆ ಸೇರಿದಂತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 10 ಮಂದಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿ, ವಿಚಾರಣೆಯನ್ನು ನಾಲ್ಕು ವಾರ ಮುಂದೂಡಿತು.

ಈಶ್ವರ ಖಂಡ್ರೆ ಚುನಾವಣೆಯಲ್ಲಿ ಭಾರಿ ಅಕ್ರಮಗಳನ್ನು ಎಸಗಿದ್ದಾರೆ. ಆದ್ದರಿಂದ ಪ್ರಜಾ ಪ್ರತಿನಿಧಿ ಕಾಯ್ದೆ1951ರ ಕಲಂ 123ರ ಅನುಸಾರ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ವಿಜೇತ ಎಂದು ಘೋಷಿಸುವಂತೆ ಅರ್ಜಿದಾರ ಡಿ.ಕೆ. ಸಿದ್ರಾಮ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಾಜ್ಯ ವಿಧಾನಸಭೆಗೆ 2018ರ ಮೇ 12ರಂದು ಚುನಾವಣೆ ಹಾಗೂ ಮೇ 15ರಂದು ಮತ ಎಣಿಕೆ ನಡೆದಿತ್ತು. 

ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿ ಈಶ್ವರ್‌ ಖಂಡ್ರೆ ಸಾಕಷ್ಟು ಅಕ್ರಮಗಳನ್ನು ನಡೆಸಿದ್ದಾರೆ.  ಮತದಾರರಿಗೆ ಅಕ್ರಮವಾಗಿ ಹಣ ಮತ್ತು 40 ಸಾವಿರಕ್ಕೂ ಹೆಚ್ಚು ಗೋಡೆ ಗಡಿಯಾರ ವಿತರಿಸಲಾಗಿದೆ. ಮತದಾರರ ಬೋಗಸ್‌ ಗುರುತಿನ ಚೀಟಿ ಸೃಷ್ಟಿಸಲಾಗಿದೆ ಮತ್ತು ಈಶ್ವರ ಖಂಡ್ರೆ ಅವರ ಒಡೆತನದ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹೆಸರುಗಳನ್ನು ಈ ಚೀಟಿಗಳಲ್ಲಿ ಸೇರ್ಪಡೆ ಮಾಡಿ ಮತದಾನ ಮಾಡಿಸಲಾಗಿದೆ. ಚುನಾವಣೆ ಮತ್ತು ಮತದಾನಕ್ಕೆ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸೇರಿದಂತೆ ಹಲವು ಆರೋಪಗಳನ್ನು ಅರ್ಜಿಯಲ್ಲಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next