ಬೆಂಗಳೂರು: ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ’ದ ಆಡಳಿತ ಮಂಡಳಿ ಸದಸ್ಯರ ಚುನಾವಣೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂಘದ ಆಡಳಿತಾ ಧಿಕಾರಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರಿಗೆ ಹೈಕೋರ್ಟ್ ಗುರುವಾರ ತುರ್ತು ನೋಟಿಸ್ ಜಾರಿಗೊಳಿಸಿದೆ.
ಈ ಕುರಿತಂತೆ ಸಂಘದ ಆಡಳಿತ ಮಂಡಳಿ ಸದಸ್ಯರಾದ ಮೈಸೂರಿನ ಎಸ್. ಚಂದ್ರಶೇಖರ್ ಹಾಗೂ ಎನ್. ಮಂಜುನಾಥ್ ಎಂಬುವರು ಸಲ್ಲಿಸಿರುವ ಅರ್ಜಿಯು ನ್ಯಾ. ಎಸ್.ಎನ್. ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಸಂಘದ ಆಡಳಿತಾಧಿಕಾರಿ, ಸಚಿವ ಜಿ.ಟಿ. ದೇವೇಗೌಡರಿಗೆ ತುರ್ತು ನೋಟಿಸ್ ಜಾರಿಗೆ ಆದೇಶಿಸಿತು.
Advertisement
ಇದೇ ವೇಳೆ ಅರ್ಜಿಯಲ್ಲಿನ ಇತರ ಪ್ರತಿವಾದಿಗಳಾದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಸಹಕಾರ ಸಂಘಗಳ ಮೈಸೂರು ವಿಭಾಗದ ಜಂಟಿ ನಿರ್ದೇಶಕರು ಸೇರಿ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು. ಜಿ.ಟಿ.ದೇವೇಗೌಡರ ಪುತ್ರ ಹರೀಶ್, ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಪರವಾಗಿ ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತದಾನ ಮಾಡಲು ಅಥವಾ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡಿರುವ ಕಾರಣ, ಮತದಾನದ ಹಕ್ಕು ಮರುಸ್ಥಾಪನೆ ಆಗುವವರೆಗೆ ಚುನಾವಣೆ ವಿಳಂಬ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.