ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಇಬ್ಬರು ಹಿಂದೂ ಬಾಲಕಿಯರನ್ನು ಅಪಹರಿಸಿ ಮತಾಂತರಗೊಳಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇವರಿಗೆ ಭದ್ರತೆ ನೀಡುವಂತೆ ಇಲ್ಲಿನ ಹೈಕೋರ್ಟ್ ಆದೇಶ ನೀಡಿದೆ. ಹೋಳಿ ಸಂದರ್ಭದಲ್ಲಿ ಇಬ್ಬರು ಬಾಲಕಿಯರನ್ನು ಸಿಂಧ್ ಪ್ರಾಂತ್ಯದ ಘೋಟಿ ಜಿಲ್ಲೆಯಲ್ಲಿನ ಮನೆಯಿಂದ ಅಪಹರಿಸಲಾಗಿತ್ತು. ಅಷ್ಟೇ ಅಲ್ಲ, ಈ ಬಾಲಕಿಯರನ್ನು ಮತಾಂತರಿಸಿ ಮದುವೆ ಮಾಡಿಸಿದ ವಿಡಿಯೋ ಕೂಡ ಬಹಿರಂಗಗೊಂಡಿತ್ತು. ಇದಕ್ಕೆ ಪಾಕಿಸ್ಥಾನ ಹಾಗೂ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯರು ಹಾಗೂ ಅವರ ಗಂಡಂದಿರು ಕೋರ್ಟ್ ಮೊರೆ ಹೋಗಿದ್ದು, ರಕ್ಷಣೆ ಒದಗಿಸುವಂತೆ ಕೋರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ, ಇಸ್ಲಾಮಾಬಾದ್ ಡೆಪ್ಯುಟಿ ಕಮಿಷನರ್ ಮತ್ತು ಮಾನವ ಹಕ್ಕುಗಳ ನಿರ್ದೇಶಕರ ಕಸ್ಟಡಿಗೆ ಇವರನ್ನು ವಹಿಸಿದ್ದಾರೆ. ಅಲ್ಲದೆ ಏಪ್ರಿಲ್ 2 ರಂದು ತನಿಖಾ ವರದಿಯನ್ನು ಸಲ್ಲಿಸಬೇಕು ಎಂದೂ ಕೋರ್ಟ್ ಸೂಚನೆ ನೀಡಿದೆ.
ಮತ್ತೂಬ್ಬ ಬಾಲಕಿಯ ಅಪಹರಣ: ಇಬ್ಬರು ಬಾಲಕಿಯರ ಅಪಹರಣ, ಒತ್ತಾಯದ ಮತಾಂತರ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿರುವ ನಡುವೆಯೇ ಪಾಕಿಸ್ಥಾನದ ಸಿಂಧ್‌ನಲ್ಲಿ ಮತ್ತೂಬ್ಬ ಹಿಂದೂ ಬಾಲಕಿಯನ್ನು ಅಪಹರಿಸಲಾಗಿದೆ. ಮೇಘಾರ್ ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.