Advertisement

ಖುಲಾಸೆಗೊಂಡರೂ “ರೌಡಿಶೀಟ್‌’ನಿಂದ ಮುಕ್ತಿ ಇಲ್ಲ

11:50 PM Apr 22, 2022 | Team Udayavani |

ಬೆಂಗಳೂರು: ಒಬ್ಬ ವ್ಯಕ್ತಿಯ ವಿರುದ್ಧ ಯಾವುದೇ ಎಫ್ಐಆರ್‌ ದಾಖಲಾಗದಿದ್ದರೂ, ಆತ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿಲ್ಲ ಎಂದರೂ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಗೆ ಸೇರಿಸಬಹುದು ಎನ್ನುವ ಮಹತ್ವದ ತೀರ್ಪನ್ನು ಹೈಕೋರ್ಟ್‌ ನೀಡಿದೆ.

Advertisement

ಜತೆಗೆ, ರೌಡಿ ಶೀಟ್‌ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿಗಳನ್ನೂ ಹೊರಡಿಸಿದೆ.
ಪ್ರಕರಣದಲ್ಲಿ ಖುಲಾಸೆಯಾ ಗಿದ್ದರೂ ತಮ್ಮ ವಿರುದ್ಧ ರೌಡಿ ಶೀಟ್‌ ತೆರೆಯಲಾಗಿದೆ ಎಂದು ಆರೋಪಿಸಿ ನಾಗರಾಜ್‌ ಅಲಿಯಾಸ್‌ ಬಾಂಬ್‌ ನಾಗ, ರಾಕೇಶ್‌ ಮಲ್ಲಿ, ಬಿ.ಎಸ್‌. ಪ್ರಕಾಶ್‌ ಸೇರಿದಂತೆ 19 ಮಂದಿ ರೌಡಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಶುಕ್ರವಾರ ಪ್ರಕಟಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಮಹತ್ವದ ತೀರ್ಪು ನೀಡಿದೆ.

ಹಿಂದೆಯೇ ಖುಲಾಸೆಯಾಗಿದ್ದ ಎಂದ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಲು ಆಗುವುದಿಲ್ಲ. ಪೊಲೀಸರು ಸೂಕ್ಷ್ಮ ಮಾಹಿತಿ ಆಧರಿಸಿಯೇ ತೀರ್ಮಾನಕ್ಕೆ ಬಂದಿರುತ್ತಾರೆ ಎಂದು ನ್ಯಾಯಪೀಠ ಹೇಳಿತು. ಶಾಸಕಾಂಗ ಈ ಕುರಿತು ಕಾನೂನು ರೂಪಿಸುವ ತನಕ ಈ ಸೂತ್ರಗಳನ್ನು ಪಾಲಿಸುವಂತೆ ನ್ಯಾಯಪೀಠ ನಿರ್ದೇಶಿಸಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ, ಪಿ.ಪ್ರಸನ್ನಕುಮಾರ್‌, ವಾದ ಮಂಡಿಸಿದ್ದರು. ಅಮಿಕಸ್‌ ಕ್ಯೂರಿ (ಕೋರ್ಟ್‌ ಸಹಾಯಕರು) ಆಗಿ ವಕೀಲ ಶ್ರೀಧರ ಪ್ರಭು ಕಾರ್ಯನಿರ್ವಹಿಸಿದ್ದರು. ಸರಕಾರದ ಪರ ವಿನೋದ ಕುಮಾರ್‌ ವಾದ ಮಂಡಿಸಿದ್ದರು.

ನ್ಯಾಯಪೀಠ ಹೇಳಿದ್ದು…
– ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ಖಚಿತ ಮಾಹಿತಿ ಇದ್ದಲ್ಲಿ ರೌಡಿ ಶೀಟ್‌ ತೆರೆಯಬಹುದು.
– ರೌಡಿಶೀಟ್‌ ತೆರೆಯುವ ಮುನ್ನ ಸಂಬಂಧಪಟ್ಟ ಬಾದಿತನಿಗೆ (ರೌಡಿ) ನೋಟಿಸ್‌ ಮೂಲಕ ಮಾಹಿತಿ ನೀಡಬೇಕು.
– ರೌಡಿಶೀಟ್‌ ಹಾಕದಂತೆ ಮನವಿ ಸಲ್ಲಿಸಲು ಬಾದಿತನಿಗೆ ಅವಕಾಶ ನೀಡಬೇಕು.
– ರೌಡಿಶೀಟ್‌ ಹಾಕುವಾಗ ಸಕಾರಣದೊಂದಿಗೆ ಲಿಖಿತ ಆದೇಶ ನೀಡಬೇಕು.
– ಜಿಲ್ಲೆಯಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿ, ನಗರದಲ್ಲಿ ಸಹಾಯಕ ಪೊಲೀಸ್‌ ಆಯುಕ್ತರು ರೌಡಿ ಶೀಟ್‌ ತೆಗೆಯಲು ಲಿಖಿತ ಆದೇಶ ಹೊರಡಿಸಬೇಕು.
– 2 ವರ್ಷಕ್ಕೊಮ್ಮೆ ರೌಡಿಶೀಟ್‌ ಮರು ಪರಿಶೀಲಿಸಬೇಕು.
– ರೌಡಿಶೀಟ್‌ ತೆರೆದ ಅನಂತರ ಅದನ್ನು ಪ್ರಶ್ನಿಸಿ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ಮೇಲ್ಮನವಿಗೆ ಅವಕಾಶ ನೀಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next