Advertisement

9 ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

10:09 PM Aug 24, 2022 | Team Udayavani |

ಬೆಂಗಳೂರು: ಒಂದಂಕಿ ಲಾಟರಿ ದಂಧೆ ಪ್ರಕರಣದಲ್ಲಿ ಸುಳ್ಳು ದಾಖಲೆ ಹಾಗೂ ಸಾಕ್ಷ್ಯವನ್ನು ಸಿದ್ಧಪಡಿಸಿದ್ದ ಆರೋಪದಡಿ ಅಬಕಾರಿ ಜಾರಿ ಹಾಗೂ ಲಾಟರಿ ನಿಷೇಧ ದಳದ ನಿವೃತ್ತ ಐಜಿಪಿ ಬಿ.ಎ.ಪದ್ಮನಯನ ಸೇರಿ 9 ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Advertisement

ಆರೋಪಿಗಳು ಸರ್ಕಾರಿ ಅ ಧಿಕಾರಿಗಳಾಗಿರುವ ಕಾರಣ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಇಲ್ಲದೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಿರುವುದು ಸರಿಯಲ್ಲ. ಅದು ಕಾನೂನಿನ ದುರ್ಬಳಕೆ ಆಗಲಿದೆ ಎಂದು ಹೈಕೋರ್ಟ್‌ ಹೇಳಿದೆ.
ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ಹಾಗೂ ಚಾರ್ಜ್‌ಶೀಟ್‌ ರದ್ದುಪಡಿಸುವಂತೆ ಕೋರಿ ಪದ್ಮನಯನ ಸೇರಿ 9 ಮಂದಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಬುಧವಾರ ಪ್ರಕಟಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಅರ್ಜಿಯನ್ನು ಭಾಗಶ: ಮಾನ್ಯ ಮಾಡಿ ಈ ಆದೇಶ ನೀಡಿದೆ.

ಪೂರ್ವಾನುಮತಿ ಇಲ್ಲದೆ ಪೊಲೀಸ್‌ ಅಧಿಕಾರಿಗಳ ವಿರುದ್ಧ ವಿಚಾರಣೆ ಮುಂದುವರಿಸಲು 2020ರ ಜ.14ರಂದು ವಿಚಾರಣಾ ನ್ಯಾಯಾಲಯ ತಗೆದುಕೊಂಡಿದ್ದ ಕಾಗ್ನಿಜೆನ್ಸ್‌ (ಒಪ್ಪಿಗೆ)ಯನ್ನು ರದ್ದು ಮಾಡಿದೆ. ಆದರೆ, ಪ್ರಾಸಿಕ್ಯೂಷನ್‌ ಸಂಸ್ಥೆಯಾಗಿರುವ ಸಿಬಿಐ ಹೊಸದಾಗಿ ಸಕ್ಷಮ ಪ್ರಾಧಿಕಾರದಿಂದ ಆರೋಪಿಗಳ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ಪಡೆದುಕೊಳ್ಳಬೇಕು. ನಂತರ ಅದನ್ನು ಸಂಬಂಧಿಸಿದ ನ್ಯಾಯಾಲಯದ ಮುಂದೆ ಮಂಡಿಸಬೇಕು. ಅಲ್ಲಿವರೆಗೆ ಯಾವುದೇ ವಿಚಾರಣೆ ನಡೆಸುವಂತಿಲ್ಲ ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್‌ ಸೂಚಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್‌.ಜಾದವ್‌, ನಿಯಮದಂತೆ ಸಿಬಿಐ ಆರೋಪ ಪಟ್ಟಿ ಸಲ್ಲಿಸಲು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದಿಲ್ಲ. ಅದನ್ನು ಸಿಬಿಐ ಕೂಡ ಒಪ್ಪಿಕೊಂಡಿದೆ. ಜೊತೆಗೆ ಪೊಲೀಸರು ದೂರು ಆಧರಿಸಿ ಅಧಿಕೃತವಾಗಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಜರುಗಿಸಿದ್ದಾರೆ. ಅದು ಸಿಆರ್‌ಪಿಸಿ ಸೆಕ್ಷನ್‌ 197ರ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ ಸಿಬಿಐ ದೋಷಾರೋಪ ಪಟ್ಟಿ ಹಾಗೂ ಪ್ರಕರಣ ಕುರಿತ ಸಿಬಿಐ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದರು.

ಅಲ್ಲದೆ, ಒಂದಂಕಿ ಲಾಟರಿ ನಡೆಸುತ್ತಿರುವ ಸಂಬಂಧ ಖುದ್ದು ಪಾರಿ ರಾಜನ್‌ ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದವು. ಅದ‌ರಿಂದಲೇ ಆತನ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಪಾರಿ ರಾಜನ್‌ ಮೇಲೆ ಆರೋಪ ಪಟ್ಟಿ ಸಲ್ಲಿಸಿತ್ತು. ಸಿಬಿಐ ಪಾರಿ ರಾಜನ್‌ ವಿರುದ್ಧ ಆರೋಪ ಕೈಬಿಟ್ಟು, ಪೊಲೀಸ್‌ ಅಧಿಕಾರಿ ವಿರುದ್ಧವೇ ಆರೋಪ ಹೊರಿಸಿದೆ. ಆರೋಪದಲ್ಲಿ ಸತ್ಯಾಂಶವಿಲ್ಲ ಎಂದಿದ್ದರು.

Advertisement

ಸಿಬಿಐ ಪರ ವಾದ ಮಂಡಿಸಿದ್ದ ವಕೀಲ ಪಿ.ಪ್ರಸನ್ನಕುಮಾರ್‌, ಸಾಕ್ಷ್ಯಗಳನ್ನು ಆಧರಿಸಿಯೇ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಪೊಲೀಸರು ತಾವೇ ಸುಳ್ಳು ಮಹಜರು ದಾಖಲೆ ಮತ್ತು ಸಾಕ್ಷ್ಯಗಳನ್ನು ಸೃಷ್ಟಿಸಿದ್ದಾರೆಂಬುದು ಕಂಡು ಬಂದಿದೆ. ಹಾಗಾಗಿ ಅರ್ಜಿ ವಜಾಗೊಳಿಸಬೇಕೆಂದು ಕೋರಿದ್ದರು.

ಲಾಟರಿ ನಿಷೇಧ ದಳದ ಪೊಲೀಸರೇ, ರಾಜನ್‌ ಮನೆ ಮೇಲೆ ಪೂರ್ವನಿಯೋಜಿತ ಸಂಚಿನ ಭಾಗವಾಗಿ 2015ರ ಮೇ 1ರಂದು ದಾಳಿ ನಡೆಸಿದ್ದರು. ಆ ಸಂಬಂಧ ಖೊಟ್ಟಿ ದಾಖಲೆ ಹಾಗೂ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಪ್ರಕರಣ ದಾಖಲಿಸಿದ್ದರು. ಅದೇ ಪುರಾವೆಗಳನ್ನು ಬಳಸಿಕೊಂಡು ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ತಿಳಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ಹಿನ್ನಲೆ:
ಕೆಜಿಎಫ್‌ ಎಸ್‌ಐ ಪ್ರಕಾಶ್‌ ನೀಡಿದ ಮಾಹಿತಿ ಆಧರಿಸಿ ಒಂದಂಕಿ ಲಾಟರಿ ದಂಧೆ ಸಂಬಂಧ ಅಬಕಾರಿ ಜಾರಿ ಹಾಗೂ ಲಾಟರಿ ನಿಷೇಧ ದಳವು ಪಾರಿ ರಾಜನ್‌ ವಿರುದ್ಧ ಪ್ರಕರಣ ದಾಖಲಿಸಿತ್ತು. ನಂತರ ದಾಳಿ ನಡೆಸಿ ಒಂದಂಕಿ ಲಾಟರಿ ಟಿಕೆಟ್‌ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು, ಪಾರಿ ರಾಜನ್‌ನನ್ನು ಬಂಧಿಸಲಾಗಿತ್ತು. ಏಳು ತಿಂಗಳು ಆತ ನ್ಯಾಯಾಂಗ ಬಂಧನದಲ್ಲಿದ್ದನು. ಪ್ರಕರಣ ಗಂಭೀರವಾಗಿದೆ ಎಂದು ಅದರ ತನಿಖೆಯನ್ನು ಸಿಐಡಿ ವರ್ಗಾವಣೆ ಮಾಡಲಾಗಿತ್ತು. ಸಿಐಡಿಯು 2015ರ ಜೂನ್‌ 29ರಂದು ರಾಜನ್‌ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. 2016ರಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ನಿಖೆ ಕೈಗೊಂಡಿತ್ತು. ತನಿಖೆ ಪೂರ್ಣಗೊಳಿಸಿದ್ದ ಸಿಬಿಐ ನಿವೃತ್ತ ಐಜಿಪಿ ಪದ್ಮನಯನ ಸೇರಿದಂತೆ 9 ಪೊಲೀಸ್‌ ಅಧಿಕಾರಿಗಳ ವಿರುದ್ದ ಸಿಬಿಐ ಕೊರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next