Advertisement

ಕಾವೇರಿ ನದಿ ಸ್ವಚ್ಛಗೊಳಿಸಲು 99 ಲ.ರೂ. ವೆಚ್ಚದ ಯೋಜನೆ

11:56 PM Jul 08, 2022 | Team Udayavani |

ಬೆಂಗಳೂರು: ಕಾವೇರಿ ಹಾಗೂ ಕನ್ನಿಕೆ ನದಿಗಳ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕಾಗಿ 99 ಲಕ್ಷ ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದ್ದು, ಅನುಮೋದನೆಗಾಗಿ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಕಾವೇರಿ ನೀರಾವರಿ ನಿಗಮವು ಹೈಕೋರ್ಟ್‌ಗೆ ತಿಳಿಸಿದೆ.

Advertisement

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಕಾವೇರಿ ನದಿಗೆ ನಿರ್ಮಿಸುವ ಮೇಲ್ಸೇತುವೆ ನಿರ್ಮಾಣ ಯೋಜನೆಗೆ ಪ್ರಶ್ನಿಸಿ ಭಾಗಮಂಡಲ ಗ್ರಾಮದ ನಿವಾಸಿ ಎಸ್‌. ಇ. ಜಯಂತ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ| ಆಲೋಕ್‌ ಆರಾಧೆ ಹಾಗೂ ನ್ಯಾ| ಜೆ.ಎಂ. ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಈ ಮಾಹಿತಿ ಸಲ್ಲಿಸಲಾಗಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ. ಸಿ. ರವಿಕುಮಾರ್‌ ವಾದ ಮಂಡಿಸಿ, ಕೊಡಗು ಭಾಗದಲ್ಲಿ ಈಗ ವ್ಯಾಪಕ ಮಳೆಯಾಗುತ್ತಿದೆ. ನವೆಂಬರ್‌ ವೇಳೆಗೆ ಮಳೆ ಕಡಿಮೆ ಆಗಲಿದೆ. ಮಳೆಗಾಲದಲ್ಲಿ ನದಿ ಸ್ವಚ್ಛತೆ ಕಾಮಗಾರಿ ಕೈಗೆತ್ತಿಕೊಂಡರೆ ಪ್ರಯೋಜನವಿಲ್ಲ. ಆದ್ದರಿಂದ ನವೆಂಬರ್‌ ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದು ಉತ್ತಮ ಎಂದರು.

ಇದೇ ವೇಳೆ ಕಾವೇರಿ ನೀರಾವರಿ ನಿಗಮದ ಪರ ವಕೀಲರು ವಾದ ಮಂಡಿಸಿ, ಕಾವೇರಿ ಹಾಗೂ ಕನ್ನಿಕೆ ನದಿಗಳ ಸ್ವಚ್ಛತೆ ಮತ್ತು ಪುನರುಜ್ಜೀವನಕ್ಕಾಗಿ 99 ಲಕ್ಷ ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸರಕಾರದಿಂದ ಅನುಮೋದನೆ ಸಿಕ್ಕಿ, ಮಳೆ ತಗ್ಗಿದ ಮೇಲೆ ಸ್ವಚ್ಛತೆ ಕಾರ್ಯ ಆರಂಭಿಸಲಾಗುವುದು. ಅದಕ್ಕಾಗಿ ಡಿಸೆಂಬರ್‌ ತನಕ ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, 2022ರ ಡಿಸೆಂಬರ್‌ 15ರೊಳಗೆ ನದಿ ಸ್ವಚ್ಛತೆ ಕಾರ್ಯ ಕೈಗೊಂಡು, 2023ರ ಜ.15ರೊಳಗೆ ವರದಿ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Advertisement

ಜಾಮೀನು ಭದ್ರತೆ: ಸುತ್ತೋಲೆ
ಬೆಂಗಳೂರು: ಕೊಲೆ, ದರೋಡೆ,ಕಳ್ಳತನ ಮತ್ತಿತರರ ಅಪರಾಧ ಪ್ರಕರಣಗಳಲ್ಲಿ ಜಾಮೀನು ಮಂಜೂರು ಮಾಡಿದ ಬಳಿಕ ಭದ್ರತೆ ಸ್ವೀಕರಿಸುವಾಗ ಜಾಗರೂಕರಾಗಿರುವಂತೆ ವಿಚಾರಣ ನ್ಯಾಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಭದ್ರತೆ ನೀಡಿದ್ದ ವ್ಯಕ್ತಿ ವಿರುದ್ಧ ಕ್ರಮ ಜರಗಿಸಿದ್ದ ಸಿವಿಲ್‌ ಕೋರ್ಟಿನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ| ಎಸ್‌. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯ ಪೀಠದ ನಿರ್ದೇಶನದ ಹಿನ್ನೆಲೆ
ಯಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ದರೋಡೆ ಪ್ರಕರಣದಲ್ಲಿ ಜಾಮೀನು ಪಡೆದು ನಾಪತ್ತೆಯಾಗಿದ್ದ ವ್ಯಕ್ತಿಯನ್ನು “ಘೋಷಿತ ಆರೋಪಿ’ ಎಂದು ಕೋರ್ಟ್‌ ತೀರ್ಮಾನಿಸಿತ್ತು. ಭದ್ರತೆ ನೀಡಿದ್ದ ಚನ್ನಯ್ಯ ಕೂಡ ತಪ್ಪಿಸಿಕೊಂಡಿದ್ದ.

ಹಾಗಾಗಿ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಆತನ ವಿರುದ್ಧ ಕ್ರಮಕ್ಕೆ ಮುಂದಾಗಿ, ಭದ್ರತೆ ಮೊತ್ತ 40 ಸಾವಿರ ರೂ. ಕಟ್ಟುವಂತೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಚನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next