Advertisement

“ಕ್ಷುಲ್ಲಕ, ವೈಯುಕ್ತಿಕ ಹಿತಾಸಕ್ತಿಯ ಪಿಐಎಲ್‌ಗ‌ಳಿದ್ದರೆ 50 ಸಾವಿರ ರೂ. ದಂಡ

07:34 PM Jul 08, 2022 | Team Udayavani |

ಬೆಂಗಳೂರು: ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌) ಕ್ಷುಲ್ಲಕ, ನಿಷ್ಪ್ರಯೋಜಕವಾಗಿದ್ದರೆ ಅಥವಾ ವೈಯುಕ್ತಿಕ ಹಿತಾಸಕ್ತಿ ಅಡಗಿರುವುದು ಮೇಲ್ನೋಟಕ್ಕೆ ಋಜುವಾತು ಆದಲ್ಲಿ ಅರ್ಜಿದಾರರಿಗೆ ಕನಿಷ್ಠ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್‌ ಮೌಖಿಕ ಎಚ್ಚರಿಕೆ ನೀಡಿದೆ.

Advertisement

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ವಕೀಲರ ವಾದ ಮಂಡನೆಯಲ್ಲಿ ಅರ್ಜಿದಾರರ ವೈಯುಕ್ತಿಕ ಹಿತಾಸಕ್ತಿ ಇರುವ ಅನುಮಾನಗಳು ಬಂದಿರುವುದರಿಂದ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್‌ ಪಡೆಯುವುದಾಗಿ ಮೆಮೊ ಸಲ್ಲಿಸಿದ ಬೆಳವಣಿಗೆಗಳನ್ನು ಗಮನಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್‌ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್‌) ಕ್ಷುಲ್ಲಕ ಅಥವಾ ವೈಯುಕ್ತಿಕ ಹಿತಾಸಕ್ತಿ ಅಡಗಿರುವುದು ಮೇಲ್ನೋಟಕ್ಕೆ ಋಜುವಾತು ಆದಲ್ಲಿ ಸೋಮವಾರದಿಂದ ಅರ್ಜಿದಾರರಿಗೆ ಕನಿಷ್ಠ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿತು.

ಶುಕ್ರವಾರ ಕೋರ್ಟ್‌ ಕಲಾಪದ ವೇಳೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್‌ ಪಡೆದುಕೊಳ್ಳಲಾಗುವುದು, ಬೇಡಿಕೆ ಈಡೇರಿದೆ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಎರಡು ಪ್ರತ್ಯೇಕ ಅರ್ಜಿಗಳಲ್ಲಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿರುವುದನ್ನು ಆಕ್ಷೇಪಿಸಿದ ನ್ಯಾಯಪೀಠ, ಒಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿ ಕೋರ್ಟ್‌ ಮುಂದೆ ವಿಚಾರಣೆಗೆ ಇರುವಾಗ ಅದನ್ನು ವಾಪಸ್‌ ಪಡೆಯಲು ಅವಕಾಶವಿಲ್ಲ ಎಂದು 1988ರಲ್ಲಿ ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.

ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಕೀಲರು ತಮ್ಮ ಕಕ್ಷಿದಾರರ ವೈಯುಕ್ತಿಕ ಹಿತಾಸಕ್ತಿಗೆ ಪೂರಕವಾಗಿ ವಾದ ಮಂಡಿಸುವುದು ಬೇಸರದ ಸಂಗತಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಅವಸರ ಮಾಡುವುದು, ಸಿನಿಯರ್‌ ಬ್ಯುಸಿ ಇದ್ದಾರೆ, ಆರೋಗ್ಯ ಸರಿ ಇಲ್ಲ ಎಂದು ಕಾರಣಗಳನ್ನು ಕೊಟ್ಟು ಮುಂದೂಡಿಕೆ ತೆಗೆದುಕೊಳ್ಳುವುದು ನ್ಯಾಯಸಮ್ಮತ ನಡೆ ಅಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯಾವುದೇ ಕಾರಣಕ್ಕೂ ವೈಯುಕ್ತಿ ಹಿತಾಸಕ್ತಿ ಆಗಬಾರದು. ಸಾರ್ವಜನಿಕ ಮಹತ್ವದ ವಿಷಯವನ್ನು ವಕೀಲರು ಅಥವಾ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಾಗ ಅದು ಕೋರ್ಟ್‌ನ ವಿಷಯ ಆಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಆರ್ಜಿ ವಾಪಸ್‌ ಪಡೆದುಕೊಳ್ಳಲು ಮನವಿ ಮಾಡಿದ ಕ್ಷಣದಿಂದ ಅರ್ಜಿದಾರರು ಪ್ರಕರಣದಲ್ಲಿ ಮುಂದುವರಿಯುವ ಅರ್ಹತೆ ಕಳೆದುಕೊಳ್ಳುತ್ತಾರೆ. ಅರ್ಜಿದಾರರು ಮುಂದುವರಿಯದಿದ್ದರೂ, ಕೋರ್ಟ್‌ ಆ ಅರ್ಜಿಯನ್ನು ಸ್ವಯಂ ಆಗಿ ತೆಗೆದುಕೊಳ್ಳುತ್ತದೆ ಎಂದು ನ್ಯಾಯಪೀಠ ಹೇಳಿದೆ.

25 ಸಾವಿರ ರೂ. ದಂಡ:
ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಡಮಾರನಹಳ್ಳಿ ಕೆರೆ ಜಾಗ ಒತ್ತುವರಿ ಮಾಡಿ ಪ್ರಾರ್ಥನಾ ಸ್ಥಳ ಹಾಗೂ ಸ್ಮಶಾನ ನಿರ್ಮಾಣ ಮಾಡಲಾಗಿದ್ದು, ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, “ನ್ಯಾಯದ ಹಿತದೃಷ್ಟಿಯಿಂದ’ ಅರ್ಜಿಯನ್ನು ವಾಪಸ್‌ ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಗುರುವಾರ (ಜು.7) ಮೆಮೋ ಸಲ್ಲಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಅರ್ಜಿ ವಾಪಸ್‌ ಪಡೆದುಕೊಳ್ಳುವ ನಿಮ್ಮ ಮನವಿ ಒಪ್ಪಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ.

Advertisement

ಹೇಗಿದ್ದರೂ, ನ್ಯಾಯದ ಹಿತದೃಷ್ಟಿಯಿಂದ’ ಎಂದು ನೀವು ಹೇಳಿದ್ದಿರಲ್ಲ, ನ್ಯಾಯದ ಹಿತ ದೃಷ್ಟಿಯಿಂದಲೇ 25 ಸಾವಿರ ರೂ.ಗಳನ್ನು ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಿ, ಒಂದಿಷ್ಟು ಜನರಿಗೆ ಅನುಕೂಲವಾಗುತ್ತದೆ. ದಂಡ ಪಾವತಿಸಿದ ರಸೀದಿಯನ್ನು ಕೋರ್ಟ್‌ಗೆ ಸಲ್ಲಿಸಿ, ಈ ಅರ್ಜಿಯಲ್ಲಿ ನೀವು ಮುಂದಿನ ವಿಚಾರಣೆಗೆ ಹಾಜರಾಗುವ ಅವಶ್ಯಕತೆ ಇಲ್ಲ. ಆ ಅರ್ಹತೆಯನ್ನು ನೀವು ಕಳೆದುಕೊಂಡಿದ್ದೀರಿ ಎಂದು ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ಹೇಳಿತು

Advertisement

Udayavani is now on Telegram. Click here to join our channel and stay updated with the latest news.

Next