ಬೆಂಗಳೂರು: ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಸಲು ಕೇವಲ 5 ನಿಮಿಷ ವಿಳಂಬ ವಾಗಿದ್ದಕ್ಕೆ ವೈದ್ಯಕೀಯ ಸೀಟು ಕಳೆದುಕೊಂಡಿದ್ದ ಬೆಳಗಾವಿಯ ಅಂಗವಿಕಲ ಯುವತಿಗೆ ಎಂಬಿಬಿಎಸ್ ಸೀಟು ನೀಡುವಂತೆ ಬೆಳ ಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೈಕೋರ್ಟ್ ಆದೇಶಿಸಿದೆ.
ತಜೀನ್ ಇನಾಂದಾರ್ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾ| ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ| ಪಿ. ಕೃಷ್ಣ ಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಕಾಲ ಕೆಲವೊಮ್ಮ ಕೆಲವು ವ್ಯಕ್ತಿಗಳ ಜೀವನದಲ್ಲಿ ಏರುಪೇರು ಉಂಟು ಮಾಡುತ್ತದೆ ಮತ್ತು ಅವರು ಆ ಸನ್ನಿವೇಶದಲ್ಲಿ ಸಂತ್ರಸ್ತರಾಗುತ್ತಾರೆ. ಅಂತೆಯೇ ಅರ್ಜಿದಾರರ ಜೀವನದಲ್ಲೂ ಒಂದು ಘಟನೆ ಆಗಿದೆ. ಅಲ್ಪಸಂಖ್ಯಾಕ ಸಮುದಾಯಕ್ಕೆ ಸೇರಿದ ಬುದ್ಧಿವಂತ ವಿದ್ಯಾರ್ಥಿನಿಗೆ ತೊಂದರೆ ಆಗಬಾರದು. ಅವರಿಗೆ ಎಂಬಿಬಿಎಸ್ ಸೀಟನ್ನು ನೀಡಲೇಬೇಕು ಎಂದು ಆದೇಶಿಸಿದೆ.
ಪ್ರಕರಣದ ಹಿನ್ನೆಲೆ
ವಿದ್ಯಾರ್ಥಿನಿಯು ಬೆಳ ಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಬಿ ಬಿಎಸ್ ಸೀಟು ಪಡೆದಿದ್ದು, 2022ರ ಮಾ.28ರಂದು ತರಗತಿಗಳಿಗೆ ಹಾಜರಾಗಿದ್ದರು. ಅದೇ ದಿನ ಸಂಜೆ ಸಂಸ್ಥೆಯ ನೋಡಲ್ ಅಧಿಕಾರಿ, ನೀವು ಹಳೆಯ ಅಂಗವೈಕಲ್ಯ ಪ್ರಮಾಣಪತ್ರ ಸಲ್ಲಿಸಿದ್ದೀರಿ. ಆ ಕಾರಣಕ್ಕೆ ನಿಮ್ಮ ಪ್ರವೇಶ ರದ್ದಾಗಿದ್ದು, ಹೊಸ ಸರ್ಟಿಫಿಕೆಟ್ ಅನ್ನು 2022ರ ಮಾ.31ರಂದು ಸಂಜೆ 5 ಗಂಟೆ ಒಳಗೆ ಸಲ್ಲಿಸಲು ಎಂದು ಹೇಳಿದ್ದರು.
ಮಾ.31ರಂದು ಸಂಜೆ 5 ಗಂಟೆಗೆ 5 ನಿಮಿಷ ಮೊದಲೇ ವಾಟ್ಸಪ್ ಮತ್ತು ಇ-ಮೇಲ್ ಮೂಲಕ ಕಳುಹಿಸ ಲಾಗಿತ್ತು. ಆದರೆ ನೋಡಲ್ ಅಧಿಕಾರಿ 5 ಗಂಟೆ ಬಳಿಕ ಅದನ್ನು ನೋಡಿ ಪ್ರವೇಶ ನಿರಾಕರಿಸಿದ್ದರು.