ಬೆಂಗಳೂರು: ನ್ಯಾಯಾಲಯದ ಕಲಾಪಗಳನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡುವುದಕ್ಕೆ ಸಂಬಂಧಿಸಿದ “ಕರ್ನಾಟಕ ರೂಲ್ಸ್ ಅನ್ ಲೈವ್ ಸ್ಟ್ರೀಮಿಂಗ್ ಆ್ಯಂಡ್ ರೆಕಾರ್ಡಿಂಗ್ ಆಫ್ ಕೋರ್ಟ್ ಪ್ರೊಸೀಡಿಂಗ್ಸ್’ ನಿಯಮಗಳು ಜಾರಿಗೆ ತಂದ ಬಳಿಕ ಇದೇ ಮೊದಲ ಬಾರಿಗೆ ಸೋಮವಾರ ಹೈಕೋರ್ಟ್‌ನಲ್ಲಿ ಪ್ರಾಯೋಗಿಕವಾಗಿ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಯಿತು.
ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಕಲಾಪ ನಡೆಸುವ ಕೋರ್ಟ್ ಹಾಲ್-1 ಸಹಿತ ನಾಲ್ಕು ಕೋರ್ಟ್ ಹಾಲ್‌ಗಳ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲು ನಿಗದಿಪಡಿಸಲಾಗಿತ್ತು. ಅದರಂತೆ ಕೋರ್ಟ್ ಹಾಲ್ 1 ಮತ್ತು 3ರ ಕಲಾಪವನ್ನು ನೇರಪ್ರಸಾರ ಮಾಡಲಾಯಿತು. ಕೋರ್ಟ್ 2 ಮತ್ತು 4ರಲ್ಲಿ ತಾಂತ್ರಿಕ ಕಾರಣಗಳಿಂದ ನೇರ ಪ್ರಸಾರ ಸಾಧ್ಯವಾಗಿಲ್ಲ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಒಂದೂವರೆ ಗಂಟೆಯ ಕಲಾಪವನ್ನು ನೆರ ಪ್ರಸಾರ ಮಾಡಲಾಗಿದ್ದು, ಸುಮಾರು 2,400 ಜನ ವೀಕ್ಷಿಸಲಿದ್ದಾರೆ.
ಕರ್ನಾಟಕ ರೂಲ್ಸ್ ಅನ್ ಲೈವ್ ಸ್ಟ್ರೀಮಿಂಗ್ ಅಂಡ್ ರೆಕಾರ್ಡಿಂಗ್ ಆಫ್ ಕೋರ್ಟ್ ಪ್ರೊಸೀಡಿಂಗ್ಸ್’, ನಿಯಮಗಳನ್ನು ಸರಕಾರ 2021ರ ಡಿ.30ರಂದು ರಾಜ್ಯಪತ್ರದಲ್ಲಿ ಪ್ರಕಟಗೊಳಿಸಿತ್ತು. ಅನಂತರ ಸೋಮವಾರವೇ ಮೊದಲ ಬಾರಿಗೆ ಪ್ರಯೋಗಿಕವಾಗಿ ಹೈಕೋರ್ಟ್ ಕಲಾಪವನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕಚೇರಿ ಮಾಹಿತಿ ನೀಡಿದೆ.
ಕಾರವಾರ ವಾಣಿಜ್ಯ ಬಂದರು ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ಅಭಿವೃದ್ಧಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿ ಬೈತಕೊಲ್ ಬಂದರು ನಿರಾಶ್ರಿತರ ಯಾಂತ್ರೀಕೃತ ದೋಣಿ ಮೀನುಗಾರರ ಸಹಕಾರ ಸಂಘ ನಿಯಮಿತ ಹಾಗೂ ಉತ್ತರ ಕನ್ನಡ ಜಿಲ್ಲಾ ಮೀನುಗಾರರ ಸಂಘ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಪ್ರಾಯೋಗಿಕವಾಗಿ ಹೈಕೋರ್ಟ್ 2021ರ ಮೇ 5ರಂದು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಆದರೆ, ನೇರಪ್ರಸಾರಕ್ಕೆ ಸಂಬಂಧಿಸಿದ ನಿಯಮಗಳು ಜಾರಿಗೆ ಬಂದ ಮೇಲೆ ಇದೇ ಮೊದಲ ಬಾರಿಗೆ ನೇರ ಪ್ರಸಾರ ಮಾಡಲಾಗಿದೆ.