ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಸಿಸಿಬಿಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಸೆ.28ರಂದು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ರಾಗಿಣಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎ ಪಾಟೀಲ ಅವರಿದ್ದ ನ್ಯಾಯಪೀಠ, ಅರ್ಜಿ ಸಂಬಂಧ ಸಿಸಿಬಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತು.
ರಾಗಿಣಿ ಪರ ವಕೀಲ ಎ. ಮೊಹಮ್ಮದ್ ತಾಹಿರ್ ವಾದ ಮಂಡಿಸಿ, ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೂ ರಾಗಿಣಿಗೂ ಯಾವುದೇ ಸಂಬಂಧವಿಲ್ಲ. ಅವರು ಡ್ರಗ್ಸ್ ಸೇವಿಸಿಲ್ಲ. ಪೂರೈಕೆ ಅಥವಾ ಮಾರಾಟವೂ ಮಾಡಿಲ್ಲ. ಪೊಲೀಸರು ಮಾಡಿರುವ ಆರೋಪಗಳಿಗೆ ಸಾಕ್ಷ್ಯಾಧಾರ ಹಾಗೂದಾಖಲೆ ಇಲ್ಲ. ರವಿಶಂಕರ್ ಹೇಳಿಕೆ ಆಧರಿಸಿ ಹಾಗೂ ಕಾನೂನು ದುರ್ಬಳಕೆ ಮಾಡಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ:ಎಫ್ಐಆರ್ ರದ್ದು : ಆದಿತ್ಯ ಅರ್ಜಿ ವಜಾ , ಪ್ರಿಯಾಂಕಾಗೆ ಸಿಸಿಬಿ ನೋಟಿಸ್
ತಪಾಸಣೆ ವೇಳೆ ತಮ್ಮ ಮನೆಯಲ್ಲಿ ಯಾವುದೇ ಮಾದಕ ಪದಾರ್ಥಗಳು ಸಿಕ್ಕಿಲ್ಲ. ಆದರೂ ಅವರನ್ನು ಪೊಲೀಸರು ಬಂಧಿಸಿದ್ದು, ಅದು ಕಾನೂನು ಬಾಹಿರ ಕ್ರಮವಾಗಿದೆ. ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಚಾರಣಾ ನ್ಯಾಯಾಲಯ ಕ್ರಮ ಸರಿಯಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.