ಬೆಂಗಳೂರು: ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ 545 ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸುವ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ಮಧ್ಯಾಂತರ ತಡೆಯಾಜ್ಞೆ ನೀಡಿದೆ.
ಮರುಪರೀಕ್ಷೆ ರದ್ದು ಕೋರಿ ಹಲವು ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ| ಜಿ. ನರೇಂದ್ರ ಅವರಿದ್ದ ವಿಭಾಗೀಯ ನ್ಯಾಯಪೀಠ, ಮರುಪರೀಕ್ಷೆ ನಿರ್ಧಾರಕ್ಕೆ ತಡೆ ನೀಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಪಿ.ಎಸ್. ರಾಜಗೋಪಾಲ್, ಎ.ಎಸ್. ಪೊನ್ನಣ್ಣ, ಡಿ.ಆರ್.ರವಿಶಂಕರ್ ಅವರು, ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಂಡಿದೆ ಮತ್ತು 32 ಮಂದಿ ಕಳಂಕಿತರು ಎಂದು ಗುರುತಿಸಿ ಅವರ ವಿರುದ್ಧ ಆರೋಪಪಟ್ಟಯನ್ನೂ ದಾಖಲಿಸಲಾಗಿದೆ. ಹಾಗಾಗಿ ಕಳಂಕಿತರನ್ನು ಮತ್ತು ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲು ಅವಕಾಶವಿರುವುದರಿಂದ ಮರು ಪರೀಕ್ಷೆ ನಡೆಸುವ ಅಗತ್ಯ ಇಲ್ಲ ಎಂದರು.
ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆರ್.ಸುಬ್ರಹ್ಮಣ್ಯ ಅವರು, ಪ್ರಕರಣ ವ್ಯಾಪಕವಾಗಿ ಹರಡಿದ್ದು, ಹಲವು ಅಧಿಕಾರಿಗಳು, ಅಭ್ಯರ್ಥಿಗಳು, ಮಧ್ಯವರ್ತಿಗಳು ಭಾಗಿಯಾಗಿದ್ದಾರೆ.
ಪರೀಕ್ಷೆಯಲ್ಲೇ ಅಕ್ರಮವಾಗಿರುವುದರಿಂದ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಮರುಪರೀಕ್ಷೆ ನಡೆಸಲು ನಿರ್ಧರಿಸಿದೆ. ನೇಮಕಾತಿ ಪ್ರಾಧಿಕಾರದ ವಿರುದ್ಧವೇ ಅಕ್ರಮವೆಸಗಿರುವ ಆರೋಪವಿರುವ ಹಿನ್ನೆಲೆಯಲ್ಲಿ ಕಳಂಕಿತ ಹಾಗೂ ಕಳಂಕಿತರಲ್ಲದ ಅಭ್ಯರ್ಥಿಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಪ್ರಕರಣದಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮರುಪರೀಕ್ಷೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.