Advertisement

ಜನನ ಮತ್ತು ಮರಣ ನೋಂದಣಿ: ಸರ್ಕಾರದ ತಿದ್ದುಪಡಿಗೆ ಹೈಕೋರ್ಟ್‌ ಮಧ್ಯಂತರ ತಡೆ

09:55 PM Aug 25, 2022 | Team Udayavani |

ಬೆಂಗಳೂರು: ವಕೀಲ ಸಮುದಾಯದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಜನನ ಮತ್ತು ಮರಣ ನೋಂದಣಿ ವ್ಯಾಜ್ಯಗಳನ್ನು ತೀರ್ಮಾನಿಸುವ ನ್ಯಾಯಾಲಯಗಳಿಗಿದ್ದ ಅಧಿಕಾರವನ್ನು ಮೊಟಕುಗೊಳಿಸಿ ಅದನ್ನು ಉಪವಿಭಾಗಾಧಿಕಾರಿಗೆ ನೀಡಿ ಸರ್ಕಾರ ತಂದಿರುವ “ಕರ್ನಾಟಕ ಜನನ ಮತ್ತು ಮರಣ (ತಿದ್ದುಪಡಿ) ನಿಯಮ-2022’ಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

Advertisement

ಈ ವಿಚಾರವಾಗಿ ಕಲಬುರಗಿ ಜಿಲ್ಲೆಯ ಚಿಂಚೋಳಿ ವಕೀಲರ ಸಂಘದ ಸದಸ್ಯ ಹಾಗೂ ಬೀದರ್‌ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುದರ್ಶನ ವಿ. ಬಿರಾದರ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.

ಅರ್ಜಿ ಆಲಿಸಿದ ನ್ಯಾಯಪೀಠ, ಸರ್ಕಾರದ ತಿದ್ದುಪಡಿ ನಿಯಮಗಳಿಗೆ ಮಧ್ಯಂತರ ತಡೆ ನೀಡಿತು. ಅಲ್ಲದೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾಂಖೀಕ ಇಲಾಖೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಕೇಂದ್ರದ ಕಾಯ್ದೆಗೆ ವಿರುದ್ಧವಾಗಿ ನಿಯಮಕ್ಕೆ ತಿದ್ದುಪಡಿ ಮಾಡುವ ಮೂಲಕ ಕೋರ್ಟ್‌ಗಳ ಅಧಿಕಾರ ಮೊಟಕುಗೊಳಿಸಿ ಉಪವಿಭಾಗಾಧಿಕಾರಿಗೆ ನೀಡಲಾಗಿದೆ. ಇದು ಕಾನೂನು ಬಾಹಿರ ಹಾಗೂ ಸಂವಿಧಾನದ ಮೂಲಭೂತ ತತ್ವಗಳಿಗೆ ವಿರುದ್ಧ. ಸಂವಿಧಾನದ ಪ್ರಕಾರ, ಜನನ ಮತ್ತು ಮರಣ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಮಾತ್ರವಿದೆ. ರಾಜ್ಯ ಸರ್ಕಾರಕ್ಕೆ ತಿದ್ದುಪಡಿ ಮಾಡುವ ಅಧಿಕಾರವೇ ಇಲ್ಲ ಎಂದು ಪ್ರತಿಪಾದಿಸಿದರು.

ಅಲ್ಲದೆ, ವಿಭಾಗಾಧಿಕಾರಿಗೆ ನ್ಯಾಯಾಂಗದ ಅಧಿಕಾರ ನೀಡಿರುವುದು ಕಾನೂನುಬಾಹಿರ. ಇದರಿಂದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುವುದಲ್ಲದೆ, ಜನರಿಗೆ ಇನ್ನಷ್ಟು ಸಮಸ್ಯೆಯಾಗಲಿದೆ. ಹಾಗಾಗಿ ಸಂವಿಧಾನಬಾಹಿರವಾದ ಕ್ರಮಕ್ಕೆ ತಡೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದರು. ತಿದ್ದುಪಡಿ ನಿಯಮಕ್ಕೆ ಹೈಕೋರ್ಟ್‌ ತಡೆ ನೀಡಿರುವುದನ್ನು ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಟಾರೆಡ್ಡಿ ಸ್ವಾಗತಿಸಿದ್ದಾರೆ.

ವಕೀಲರು ವಿರೋಧಿಸಿದ್ದರು
ತಿದ್ದುಪಡಿಯನ್ನು ಬೆಂಗಳೂರು ವಕೀಲರ ಸಂಘ ಸೇರಿ ರಾಜ್ಯದ ಎಲ್ಲ ವಕೀಲ ಸಂಘಟನೆಗಳು ವಿರೋಧಿಸಿ, ಪ್ರತಿಭಟನೆ ನಡೆಸಿದ್ದವು. ತಿದ್ದುಪಡಿ ಕಾನೂನು ಬಾಹಿರವಾಗಿದೆ. ಅಲ್ಲದೇ ಈ ತಿದ್ದುಪಡಿಯಿಂದ ವೃತ್ತಿಪರ ವಕೀಲರಿಗೆ ತೊಂದರೆಯಾಗಲಿದ್ದು, ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ. ಜನನ ಮತ್ತು ಮರಣ ನೋಂದಣಿ ಕಾಯ್ದೆ ಸೆಕ್ಷನ್‌ 13(3)ರಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅಥವಾ ಪ್ರಸಿಡೆನ್ಸಿ ಮ್ಯಾಜಿಸ್ಟ್ರೇಟ್‌ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರವಿಲ್ಲ. ಮೂಲ ಕಾಯ್ದೆಗೆ ವಿರುದ್ಧವಾಗಿ ತಿದ್ದುಪಡಿ ಮಾಡಿ ಈಗ ಆ ಅ ಧಿಕಾರವನ್ನು ಉಪವಿಭಾಗಾ ಕಾರಿಗೆ ನೀಡಲಾಗಿದೆ. ಈ ತಿದ್ದುಪಡಿ ಕಾನೂನು ಬಾಹಿರವಾಗಿರುವುದರಿಂದ ಕೂಡಲೇ ಅದನ್ನು ವಾಪಸ್‌ ಪಡೆಯಬೇಕು ಎಂದು ವಕೀಲರ ಸಂಘ ಕಾನೂನು ಕಾರ್ಯದರ್ಶಿಗೆ ಪತ್ರ ಬರೆದಿತ್ತು.

Advertisement

ಈಗ ತಿದ್ದುಪಡಿ ನಿಯಮಕ್ಕೆ ಹೈಕೋರ್ಟ್‌ ತಡೆ ನೀಡಿರುವುದನ್ನು ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಟಾರೆಡ್ಡಿ ಸ್ವಾಗತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next