Advertisement

ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

11:15 PM Nov 30, 2021 | Team Udayavani |

ಬೆಂಗಳೂರು: ಪೇಜಾವರ ಶ್ರೀಗಳು ಮತ್ತು ಬಿಳಿಗಿರಿ ರಂಗನಾಥ ಸ್ವಾಮಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

Advertisement

ಪ್ರಕರಣ ಸಂಬಂಧ ತಮ್ಮ ವಿರುದ್ಧ ಬಸವನಗುಡಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್ಐಆರ್‌, ತನಿಖೆ ಮತ್ತು 37ನೇ ಎಸಿಸಿಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಗಂಗರಾಜು ಅಲಿಯಾಸ್‌ ಹಂಸಲೇಖ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಾದ ಆಲಿಸಿದ ನ್ಯಾಯಪೀಠ, ಹಂಸಲೇಖ ವಿರುದ್ಧದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಅಲ್ಲದೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ಬಸವನಗುಡಿ ಠಾಣಾ ಪೊಲೀಸರು, ಡಾ.ಮುರಳೀಧರ ಮತ್ತು ಎಸ್‌.ಎನ್‌.ಅರವಿಂದಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಸಿ.ಎಸ್‌. ದ್ವಾರಕನಾಥ್‌ ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಎರಡು ದೂರಿನಲ್ಲಿ ಆರೋಪಗಳು ಒಂದೇ ಘಟನೆಗೆ ಸಂಬಂಧಿಸಿದ್ದಾಗಿದೆ. ಒಂದೇ ಘಟನೆ ಸಂಬಂಧ ಎರಡು ಎಫ್ಐಆರ್‌ ದಾಖಲಿಸಲಾಗಿದೆ. ಇದು ಕಾನೂನು ಬಾಹಿರ ಕ್ರಮ ಎಂದು ತಿಳಿಸಿದರು.

ಇದನ್ನೂ ಓದಿ:ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Advertisement

ಅಲ್ಲದೆ, ದೂರಿನಲ್ಲಿ ಹೇಳಿರುವಂತೆ ಅರ್ಜಿದಾರರು ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಎರಡು ವರ್ಗಗಳ ನಡುವೆ ದ್ವೇಷಭಾವನೆ ಉಂಟು ಮಾಡುವ, ಸಮಾಜದಲ್ಲಿ ಶಾಂತಿ ಕದಡುವ ಅವಹೇಳನಕಾರಿ ಹೇಳಿಕೆ ನೀಡುವ ಕೃತ್ಯ ಮಾಡಿಲ್ಲ. ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಕಾಗ್ನಿಜೆನ್ಸ್‌ (ಸಂಜ್ಞೆಯ) ಅಪರಾಧ ಕೃತ್ಯಗಳಿಲ್ಲ. ಅದನ್ನು ಪರಿಶೀಲಿಸದೆ ಎಫ್ಐಆರ್‌ ದಾಖಲಿಸಲಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿದರೆ ಅವರ ಜೀವನ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ತನಿಖೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದರು.

ಪ್ರಕರಣದ ಹಿನ್ನಲೆ: ಮೈಸೂರಿನಲ್ಲಿ 2021ರ ನ.13ರಂದು ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಂಸಲೇಖ, ಪೇಜಾವರಶ್ರೀ ಮತ್ತು ಬಿಳಿಗಿರಿ ರಂಗನಾಥ ದೇವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಡಾ.ಮುರಳಿಧರ ಮತ್ತು ಎಸ್‌.ಎನ್‌. ಅರವಿಂದ ಅವರು ನೀಡಿದ ದೂರು ಮೇರೆಗೆ ಬಸವನಗುಡಿ ಠಾಣಾ ಪೊಲೀಸರು ಹಂಸಲೇಖ ವಿರುದ್ಧ ನ.17ರಂದು ಎರಡು ಎಫ್ಐಆರ್‌ ದಾಖಲಿಸಿದ್ದರು. ಜತೆಗೆ, ನ.21ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ನ.25ರಂದು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದ ಹಂಸಲೇಖ, ಇದೀಗ ಈ ಎಫ್ಐಆರ್‌ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಪರ ವಕೀಲ ಜೆ.ಡಿ. ಕಾಶೀನಾಥ್‌ ವಕಾಲತ್ತು ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next