ಬೆಂಗಳೂರು: ಯಾವುದೇ ನಾನ್ ಕಾಗ್ನಿಜೆಬಲ್’ (ಅಸಂಜ್ಞೆಯ) ಅಪರಾಧ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿಯನ್ನು ತನಿಖೆಗೆ ಆದೇಶ ಎಂದಾಗುವುದಿಲ್ಲ ಎಂದು ಹೇಳಿರುವ ಹೈಕೋರ್ಟ್, ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮಾಡುವಂತಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಜತೆಗೆ, ನಾನ್ ಕಾಗ್ನಿಸಬಲ್ ಅಪರಾಧ ಪ್ರಕರಣಗಳಲ್ಲಿ ತನಿಖೆ ಮುಂದುವರೆಸಲು ನ್ಯಾಯಾಲಯದ ಸಮ್ಮತಿ ಕೋರಿ ಪೊಲೀಸರು ಮನವಿ ಸಲ್ಲಿಸಿದಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಪಾಲಿಸಬೇಕಾದ ಮಾರ್ಗಸೂಚಿಗಳನ್ನೂ ಸಹ ಹೈಕೋರ್ಟ್ ರೂಪಿಸಿದೆ.
ಬೆಂಗಳೂರಿನ ಹರಿರಾಜ್ ಶೆಟ್ಟಿ ಅವರು ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನೀಡಿರುವ ತೀರ್ಪಿನಲ್ಲಿ ಈ ಮೇಲಿನ ಅಂಶಗಳನ್ನು ಹೇಳಲಾಗಿದೆ.
ಇದನ್ನೂ ಓದಿ:ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮತ್ತೆ ಸಿಖ್ಖರ ಮೇಲೆ ಹಲ್ಲೆ
ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ತನಿಖೆಗೆ ಆದೇಶ ಪಡೆದಿಲ್ಲ. ಬದಲಿಗೆ ಅನುಮತಿ ಪಡೆದಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಗೆ ಅನುಮತಿಸಲಾಗಿದೆ ಎಂದಿದ್ದಾರೆ. ತನಿಖೆಗೆ ಅನುಮತಿಸಲಾಗಿದೆ ಎನ್ನುವುದು ಸಿಆರ್‌ಪಿಸಿ ಸೆಕ್ಷನ್ 155(1) ಹಾಗೂ 155(2) ರ ಆವಶ್ಯಕತೆಗಳನ್ನು ಪೂರೈಸಿದಂತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಪ್ರಕ್ರಿಯೆಯನ್ನು ರದ್ದುಪಡಿಸಿದೆ. ಅಲ್ಲದೇ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೈಕೋರ್ಟ್ ಸೂಚಿಸಿದೆ.