ಬೆಂಗಳೂರು: ಜಂತಕಲ್ ಎಂಟರ್‌ಪ್ರೈಸಸ್ ಕಂಪನಿಗೆ ಗಣಿ ಪರವಾನಗಿ ನೀಡಲು ಸಹಕರಿಸಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹೈಕೋರ್ಟ್ ಜಾಮೀನು ನೀಡಿದ್ದು, ಬಿಗ್ ರಿಲೀಫ್ ದೊರೆತಿದೆ. ಕುಮಾರಸ್ವಾಮಿ
ಸಲ್ಲಿಸಿದ್ದ ನಿರಿಕ್ಷಣಾ ಜಾಮೀನು ಅರ್ಜಿ ವಿಲೇವಾರಿ ಮಾಡಿರುವ ಹೈಕೋರ್ಟ್, ಗುರುವಾರ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿದೆ. ಅರ್ಜಿದಾರರಾದ ಎಚ್.ಡಿ.ಕುಮಾರಸ್ವಾಮಿ 5 ಲಕ್ಷ ರೂ.ಗಳ ಎರಡು ಶ್ಯೂರಿಟಿ ನೀಡಬೇಕು. ಎಸ್ ಐಟಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಪ್ರತಿ 15ದಿನಗಳಿಗೊಮ್ಮೆ ಹಾಜರಾಗಬೇಕು.
ಪ್ರಕರಣದ ಸಂಪೂರ್ಣ ತನಿಖೆಗೆ ಸಹಕರಿಸಬೇಕು.
ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದೆಂಬ ಷರತ್ತುಗಳನ್ನು ವಿಧಿಸಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು.
ಎಚ್.ಡಿ.ಕುಮಾರಸ್ವಾಮಿ ಪರ ವಕೀಲ ಹಸ್ಮತ್ ಪಾಷಾ ವಾದಿಸಿ, “ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಎಸ್ ಐಟಿ ಅಧಿಕಾರಿಗಳು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಎಫ್ಐಆರ್‌ಗಳನ್ನು ದಾಖಲಿಸಿದ್ದಾರೆ. ಉಳಿದ ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಈ ಪ್ರಕರಣದ ಇತರೆ ಆರೋಪಿಗಳಿಗೆ ಜಾಮೀನು ದೊರೆತಿದೆ. ಹೀಗಾಗಿ ಜಾಮೀನು ನೀಡಬೇಕು’ ಎಂತೆ
ನ್ಯಾಯಪೀಠಕ್ಕೆ ಕೋರಿದರು.