Advertisement

ವರ್ಗಾವಣೆ ವೈಖರಿಗೆ ಹೈಕೋರ್ಟ್‌ ಗರಂ

07:37 AM Jan 10, 2018 | Team Udayavani |

ಬೆಂಗಳೂರು: ಸೂಕ್ತ ನಿಯಮಗಳ ಅನ್ವಯ ಸರ್ಕಾರಿ  ಅಧಿಕಾರಿಗಳ ವರ್ಗಾವಣೆ ವಿಚಾರ ನಿಭಾಯಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫ‌ಲವಾಗಿದೆ
ಎಂದು ಹೈಕೋರ್ಟ್‌ ಕಿಡಿಕಾರಿದೆ. ನಿಯಮಗಳನ್ನು ಪಾಲಿಸದೆ ತಮ್ಮನ್ನು ಮೂರು ಬಾರಿ ವರ್ಗಾವಣೆ ಮಾಡಿ, ಈವರೆಗೂ ನಿಯೋಜನೆಗೊಳಿಸಿಲ್ಲ ಎಂದು ಆಕ್ಷೇಪಿಸಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಶಿವರಾಜ್‌ ಎ. ಕಳವೆ ಎಂಬುವವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ಕುಮಾರ್‌ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

Advertisement

ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರ ಯಾವಾಗಲೂ ಗೊಂದಲದ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಅಧಿಕಾರಿಗಳು ಕೆಎಟಿ, ಹೈಕೋರ್ಟ್‌ಗಳಿಗೆ ಬರುತ್ತಾರೆ. ಕೆಲಸ ಮಾಡದೆ ಸಂಬಳ ಪಡೆಯುತ್ತಿದ್ದಾರೆ. ಹಾಗಾದರೆ, ವರ್ಗಾವಣೆ ನಿಯಮಾವಳಿಗಳು ಬರಿ ತೋರಿಕೆಗೆ ಸೀಮಿತವೇ ಎಂದು ಪ್ರಶ್ನಿಸಿತು. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ವಿಫ‌ಲವಾಗಿದೆ ಎಂದು  ಅಸಮಾಧಾನ ವ್ಯಕ್ತಪಡಿಸಿತು. 

ಸರ್ಕಾರ ಗೊಂದಲಗಳಿಲ್ಲದೆ ಆದೇಶ ಹೊರಡಿಸಿದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸರ್ಕಾರ ಮಾಡುವ ಎಡವಟ್ಟುಗಳಿಂದ ವರ್ಗಾವಣೆ ವಿಚಾರ ಸಂಬಂಧಿ ಅರ್ಜಿಗಳೇ ಬರುತ್ತವೆ. ಸರ್ಕಾರದ ಆಡಳಿತ ವೈಖರಿ ತೀವ್ರ ಬೇಸರ ತರಿಸಿದೆ ಎಂದ ನ್ಯಾಯಪೀಠ, ಇದೊಂದು ಗಂಭೀರ ವಿಚಾರವಾಗಿದ್ದು ಕೂಲಂಕಷ ವಿಚಾರಣೆ ನಡೆಸಬೇಕಿದೆ ಎಂದು ಅಭಿಪ್ರಾಯಪಟ್ಟು ಜ.12ಕ್ಕೆ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next