ಬೆಂಗಳೂರು: ಹಿಂದುಳಿದ ವರ್ಗಕ್ಕೆ ಸೇರಿದ್ದ ವ್ಯಕ್ತಿಯೊಬ್ಬರು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಹುದ್ದೆಗೆ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ನೇಮಕಗೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಇಂಥವರಿಗೆ ಯಾವುದೇ ದಯೆ ತೋರಿಸಬಾರದು ಎಂದು ಹೇಳಿ ಕೆಲಸದಿಂದ ವಜಾಗೊಳಿಸಿದೆ.
ಕಲಬುರಗಿಯ ಡಾ| ಗುರುದೇವ ಗೊಲ್ಲಪ್ಪ ಯಡ್ರಾಮಿ ಅವರು ಹಿಂದುಳಿದ ವರ್ಗ ಕುರುಬ ಸಮುದಾಯಕ್ಕೆ ಸೇರಿದ್ದರೂ ಪರಿಶಿಷ್ಟ ಪಂಗಡವಾದ ಗೊಂಡ ಸಮುದಾಯಕ್ಕೆ ಸೇರಿದ್ದೇನೆಂದು ನಕಲಿ ಜಾತಿ ಪ್ರಮಾಣ ಪತ್ರವನ್ನು ನೀಡಿ 1995ರಲ್ಲಿ ಆಯುಷ್ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು. ಇದನ್ನು ಕೃಷ್ಣಮೂರ್ತಿ ನಾಯ್ಕ ಮತ್ತು ಸಿ.ಬಿ.ನಂಜರಾಜು ಎಂಬವರು ಪರಿಶಿಷ್ಟ ಪಂಗಡಗಳ ಕಲ್ಯಾಣ ಮತ್ತು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು.
ಮೇಲ್ಮನವಿ ಪ್ರಾಧಿಕಾರವು ನೇಮಕವನ್ನು ಅಸಿಂಧುಗೊಳಿಸಿದ್ದನ್ನು ಡಾ| ಗುರುದೇವ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ| ವಿ.ಶ್ರೀಶಾನಂದ ಅವರ ನ್ಯಾಯಪೀಠ, ನೇಮಕಾತಿಯೇ ನಕಲಿ ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ನಡೆದಿರುವುದರಿಂದ ಅರ್ಜಿದಾರರನ್ನು ಸೇವೆಯಿಂದ ವಜಾಗೊಳಿಸಬೇಕು. ಅವರು ಯಾವುದೇ ರೀತಿಯ ಸೇವಾ ಸವಲತ್ತು ಪಡೆಯಲು ಅರ್ಹರಲ್ಲ ಎಂದು ಆದೇಶಿಸಿದೆ.
ಅರ್ಜಿದಾರರು ಕಲಬುರಗಿಯಲ್ಲಿ ಕುರುಬ ಮತ್ತು ಗೊಂಡ ಸಮುದಾಯ ಒಂದೇ ಎಂದು ವಾದಿಸಿದ್ದಾರೆ. ಈ ವಾದದಲ್ಲಿ ಹುರುಳಿಲ್ಲ. ಅಲ್ಲದೆ ಅರ್ಜಿದಾರರು ಶಿಕ್ಷಣ ಪಡೆಯುವಾಗ ತಾವು ಹಿಂದುಳಿದ ವರ್ಗಕ್ಕೆ ಸೇರಿರುವುದಾಗಿ ತಿಳಿಸಿದ್ದಾರೆ. ಆದರೆ ಉದ್ಯೋಗ ನೇಮಕಾತಿಯ ಸಂದರ್ಭದಲ್ಲಿ ಸತ್ಯವನ್ನು ಮರೆಮಾಚಿ ನಕಲಿ ದಾಖಲೆ ಸೃಷ್ಟಿಸಿ ಉದ್ಯೋಗ ಪಡೆದಿದ್ದಾರೆ. ಈ ನಡೆಯಿಂದ ಪರಿಶಿಷ್ಟ ಪಂಗಡದ ವ್ಯಕ್ತಿಯೊಬ್ಬರಿಗೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಅವಕಾಶ ನಿರಾಕರಿಸಲ್ಪಟ್ಟಿದೆ ಎಂದು ನ್ಯಾಯಪೀಠ ಹೇಳಿದೆ.