ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವ ಸರಕಾರದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.
ಅರ್ಜಿಗಳು ನ್ಯಾಯಮೂರ್ತಿ ಕೆ. ಸೋಮಶೇಖರ್ ಹಾಗೂ ನ್ಯಾ| ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿದ್ದವು.
ಈ ವೇಳೆ ರಾಜ್ಯ ಸರಕಾರದ ಪರ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಪ್ರಕರಣದಲ್ಲಿ ವಾದ ಮಂಡಿಸಬೇಕಾದ ಹಿರಿಯ ವಕೀಲ ಕಪಿಲ್ ಸಿಬಲ್ ಕಾರಣಾಂತರದಿಂದ ವಿಚಾರಣೆಗೆ ಗೈರಾಗಿ¨ªಾರೆ. ಈ ಹಿನ್ನೆಲೆ ಬೇರೊಂದು ದಿನ ವಿಚಾರಣೆ ನಿಗದಿ ಮಾಡಬೇಕು ಎಂದು ನ್ಯಾಯಪೀಠವನ್ನು ಮನವಿ ಮಾಡಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ ಆ. 12ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಇದೇ ವೇಳೆ, ಬಸನಗೌಡ ಪಾಟೀಲ್ ಯತ್ನಾಳ್ ಪರ ವಕೀಲ ವೆಂಕಟೇಶ್ ದಳವಾಯಿ ಪ್ರಕರಣ ಸಂಬಂಧ ದಾಖಲೆಗಳ ಲಿಖೀತ ಸಾರಾಂಶವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಸಂವಿಧಾನದ 135ನೇ ವಿಧಿಯ ಉದ್ದೇಶ, ಕೇಂದ್ರೀಯ ವಿಚಕ್ಷಣ ಆಯೋಗ ಕಾಯ್ದೆಯ 2003ರ ನೆಲೆಯಲ್ಲಿ ಕೇಂದ್ರೀಯ ವಿಚಕ್ಷಣ ಆಯೋಗದ ಪಾತ್ರ ಸೇರಿದಂತೆ ಹಲವು ವಿಚಾರಗಳ ಕುರಿತು ಅರ್ಜಿದಾರರ ಪರ ವಕೀಲರಿಂದ ವಾದ ಆಲಿಸಬೇಕಿದೆ ಎಂದು ನ್ಯಾಯಪೀಠ ಹೇಳಿತು.