ಬೆಂಗಳೂರು: ಬರ ನಿರ್ವಹಣೆ ಹಾಗೂ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಕಳೆದ 12 ವರ್ಷಗಳಿಂದ ರಾಜ್ಯದಲ್ಲಿ “ರಾಜ್ಯ ವಿಪತ್ತು ಉಪಶಮನ ನಿಧಿ (ಎಸ್‌ಡಿಎಂಎಫ್) ಸ್ಥಾಪನೆ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತಂತೆ ಹೈಕೋರ್ಟ್ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿವಾಸಿ ಎ.ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ.ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿ ಸಂಬಂಧ ಮಧ್ಯಂತರ ಆದೇಶದ ಉಕ್ತಲೇಖನ ಮಾಡುವ ವೇಳೆ ಈ ಅಸಮಾಧಾನ ವ್ಯಕ್ತಪಡಿಸಿತು.
ಮಧ್ಯಂತರ ಆದೇಶದ ಉಕ್ತಲೇಖನ ವೇಳೆ ಮುಖ್ಯ ನ್ಯಾಯಮೂರ್ತಿಯವರು “ವಿಪತ್ತು ನಿರ್ವಹಣಾ ಕಾಯ್ದೆ-2005ರಡಿ “ರಾಜ್ಯ ವಿಪತ್ತು ಉಪಶಮನ ನಿಧಿ’ (ಎಸ್‌ಡಿಎಂಎಫ್) ಸ್ಥಾಪನೆಯ ಉಪನಿಯಮ ಜಾರಿಗೆ ಬಂದಿರುವುದು 2007ರಲ್ಲಿ. ಆದರೆ, ಸರ್ಕಾರದ ಪರ ವಕೀಲರು ಸಲ್ಲಿಸಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಈವರೆಗೆ ಎಸ್‌ಡಿಎಂಎಫ್ ಸ್ಥಾಪನೆ ಆಗಿಲ್ಲ. 12 ವರ್ಷ ಕಳೆದರೂ ಈ ನಿಧಿ ಸ್ಥಾಪನೆ ಮಾಡಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ವೇಳೆ ಅರ್ಜಿದಾರ ಎ.ಮಲ್ಲಿಕಾರ್ಜುನ ವಾದ ಮಂಡಿಸಿ, 65 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಬರ ಘೋಷಣೆ ಮತ್ತು ಅದನ್ನು ಹಿಂಪಡೆಯುವ ಅಧಿಕಾರ ಇರುವುದು “ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ’ಗೆ. ಆದರೆ, ಕಳೆದ ಡಿಸೆಂಬರ್‌ನಲ್ಲಿ 153 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಅದಾದ ಬಳಿಕ ರಾಜ್ಯಮಟ್ಟದ ಕಾರ್ಯಕಾರಿ ಸಮಿತಿ ಯಾವುದೇ ತೀರ್ಮಾನ ಮಾಡಿಲ್ಲ. ಆದ್ದರಿಂದ ರಾಜ್ಯದಲ್ಲಿ 153 ತಾಲೂಕುಗಳನ್ನು ಇನ್ನೂ ಬರ ಮುಂದುವರಿದಿದೆ ಎಂದೇ ಅರ್ಥ ಎಂದು ಮನವರಿಕೆ ಮಾಡಿದರು. ಮಧ್ಯಂತರ ಆದೇಶದ ಉಕ್ತಲೇಖನವನ್ನು ಸೋಮವಾರ (ಜುಲೈ 22) ಮುಂದುವರಿಸುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.
ರಾಜ್ಯದಲ್ಲಿ ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಬೇಕು, ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಹಾಗೂ ಆರೋಗ್ಯ ಆರೈಕೆಗೆ ಕ್ರಮ ಕೈಗೊಳ್ಳಬೇಕು ಮತ್ತು ವಿಪತ್ತು ನಿರ್ವಹಣಾ ಕಾಯ್ದೆ-2005ನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಗಳಲ್ಲಿ ಕೋರಲಾಗಿದೆ.