Advertisement

ಉಚ್ಚಿಲ ದೇವಸ್ಥಾನ: ವ್ಯವಸ್ಥಾಪನ ಸಮಿತಿ ನೇಮಕಾತಿ ಆದೇಶಕ್ಕೆ ಹೈಕೋರ್ಟ್‌ ತಡೆ

09:34 PM Jan 05, 2022 | Team Udayavani |

ಬೆಂಗಳೂರು: ಉಡುಪಿಯ ಉಚ್ಚಿಲ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ನೇಮಿಸಿದ್ದ ಜಿಲ್ಲಾ ಧಾರ್ಮಿಕ ಪರಿಷತ್‌ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಜಿಲ್ಲಾ ಧಾರ್ಮಿಕ ಪರಿಷತ್‌ ಆದೇಶ ಪ್ರಶ್ನಿಸಿ ದೇವಸ್ಥಾನದ ಆನುವಂಶೀಯ ಟ್ರಸ್ಟಿ ಹಾಗೂ ಅರ್ಚಕರಾಗಿದ್ದ ಯು. ಗಣೇಶ್‌ ಭಟ್‌ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕ ಸದಸ್ಯ ನ್ಯಾಯಪೀಠ ಬುಧವಾರ ತಡೆ ನೀಡಿದೆ.

ಅರ್ಜಿ ಕುರಿತ ಮುಂದಿನ ಆದೇಶದವರೆಗೆ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ನೇಮಕಾತಿ ಆದೇಶಕ್ಕೆ ತಡೆಯಾಜ್ಞೆ ನೀಡಿರುವುದಾಗಿ ನ್ಯಾಯಪೀಠ ತಿಳಿಸಿದೆ. ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತ, ರಾಜ್ಯ ಧಾರ್ಮಿಕ ಪರಿಷತ್‌, ಉಡುಪಿ ಜಿಲ್ಲಾಧಾರ್ಮಿಕ ಪರಿಷತ್‌, ಜಿಲ್ಲಾಧಿಕಾರಿ, ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯ ಟ್ರಸ್ಟಿಗಳಿಗೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ವಕೀಲ ವಿ.ಆರ್‌. ಪ್ರಸನ್ನ ವಾದ ಮಂಡಿಸಿ, ಗಣೇಶ್‌ ಭಟ್‌ ಅವರು ಮಹಾಲಿಂಗೇಶ್ವರ ಮಹಾಗಪತಿ ದೇವಸ್ಥಾನದ ಆನುವಂಶೀಯ ಟ್ರಸ್ಟಿ ಮತ್ತು ಅರ್ಚಕರಾಗಿ 2012ರ ಫೆ.2ರಂದು ನೇಮಕಗೊಂಡಿದ್ದರು. 2014ರಲ್ಲಿ ಕೆಲ ಅಕ್ರಮ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅರ್ಚಕ ಹಾಗೂ ಟ್ರಸ್ಟಿ ಸ್ಥಾನದಿಂದ ಅವರನ್ನು ಅಮಾನತು ಮಾಡಲಾಗಿತ್ತು. ಅನಂತರ 2016ರಲ್ಲಿ ವಜಾ ಮಾಡಲಾಗಿತ್ತು ಎಂದು ತಿಳಿಸಿದರು.

ಇದನ್ನೂ ಓದಿ:ಪ್ರಸಿದ್ಧ ಹಿನ್ನೆಲೆ ಗಾಯಕ ಸೋನು ನಿಗಮ್‌ ಕುಟುಂಬಕ್ಕೆ ಕೋವಿಡ್ ಸೋಂಕು

Advertisement

ವಿಚಾರಣ ನ್ಯಾಯಾಲಯವು 2021ರ ಮಾ.22ರಂದು ಗಣೇಶ್‌ ಭಟ್‌ ಅವರನ್ನು ಎಲ್ಲ ಆರೋಪಗಳಿಂದ ದೋಷಮುಕ್ತಗೊಳಿಸಿತ್ತು. 2021ರ ಅ.21ರಂದು ಜಿಲ್ಲಾ ಧಾರ್ಮಿಕ ಪರಿಷತ್‌ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೂತನ ಟ್ರಸ್ಟಿಗಳನ್ನು ನೇಮಿಸಿತು. ಆದರೆ, ಗಣೇಶ್‌ ಭಟ್‌ ಅವರನ್ನು ಕೈಬಿಟ್ಟಿದೆ ಎಂದು ತಿಳಿಸಿದರು.

ಅಲ್ಲದೆ, ಕಾನೂನು ಪ್ರಕಾರ ಆನುವಂಶೀಯ ಅರ್ಚಕರನ್ನು ದೇವಸ್ಥಾನದ ಟ್ರಸ್ಟಿಯನ್ನಾಗಿ ನೇಮಿಸುವುದು ಕಡ್ಡಾಯ. ಒಂದು ವೇಳೆ ಅರ್ಚಕರ ಮೇಲೆ ಯಾವುದಾದರೂ ಆರೋಪವಿದ್ದರೆ, ಅವರ ಕುಟುಂಬ ಸದಸ್ಯರನ್ನು ಅರ್ಹ ವ್ಯಕಿಯಾಗಿ ನೇಮಿಸಬೇಕು. ಹೀಗಾಗಿ, ತಮ್ಮ ಕುಟುಂಬ ಸದಸ್ಯರನ್ನು ಟ್ರಸ್ಟಿಯಾಗಿ ನೇಮಕ ಮಾಡುವಂತೆ ಕೋರಿ ಗಣೇಶ್‌ ಭಟ್‌ 2021ರ ನ.11ರಂದು ಮನವಿ ಪತ್ರ ಸಲ್ಲಿಸಿದ್ದರೂ, ಅದನ್ನು ಸರಕಾರ ಪರಿಗಣಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಈ ವಾದ ಪರಿಗಣಿಸಿದ ನ್ಯಾಯಪೀಠ, ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ನೇಮಕಾತಿ ಆದೇಶಕ್ಕೆ ತಡೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next