ಬೆಂಗಳೂರು: ಹೊಸಪೇಟೆ- ವಾಸ್ಕೊ ಹಾಗೂ ಲೋಂಡ-ಮಿರ್ಜಾ ರೈಲು ಮಾರ್ಗವಿರುವ ದಟ್ಟ ಅರಣ್ಯ ಪ್ರದೇಶಗಳಲ್ಲಿ ರಾತ್ರಿ ವೇಳೆ ಚಲಿಸುವ ರೈಲುಗಳ ವೇಗ ಕಡಿಮೆ ಮಾಡುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಅರಣ್ಯ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ವಿಚಾರವಾಗಿ ಗಿರಿಧರ ಕುಲಕರ್ಣಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಹಾಗೂ ನ್ಯಾ| ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಬೆಳಗಾವಿ, ಹಳಿಯಾಳ ಮತ್ತು ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ವನ್ಯಜೀವಿಗಳನ್ನು ಸಂರಕ್ಷಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಅದು ಕೇವಲ ಅಸ್ಸಾಂ ಅಥವಾ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅನ್ವಯವಾಗಲಿವೆ. ದಟ್ಟ ಅರಣ್ಯ ಪ್ರದೇಶಗಳ ಮೂಲಕ ರಾತ್ರಿ ವೇಳೆ ಹಾದು ಹೋಗುವ ರೈಲುಗಳ ವೇಗದ ಮಿತಿ ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್ ರೈಲ್ವೇ ಇಲಾಖೆಗೆ ಈಗಾಗಲೇ ನಿರ್ದೇಶನ ನೀಡಿದೆ. ಆದ್ದರಿಂದ ಸುಪ್ರೀಂಕೋರ್ಟ್ ಆದೇಶ ಪಾಲಿಸದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಿಬಂದಿ ವಿರುದ್ಧ ಕಾನೂನು ರೀತಿ ಕ್ರಮ ಜರಗಿಸುವಂತೆಯೂ ಸ್ಪಷ್ಟ ನಿರ್ದೇಶನವಿದೆ ಎಂದು ನ್ಯಾಯಪೀಠ ಉಲ್ಲೇಖಿಸಿದೆ.
Related Articles
ಅರ್ಜಿದಾರರ ಆಕ್ಷೇಪ
ದಟ್ಟ ಅರಣ್ಯ ಪ್ರದೇಶಗಳಲ್ಲಿ ರಾತ್ರಿ ವೇಳೆ ರೈಲುಗಳು ವೇಗವಾಗಿ ಸಂಚರಿಸುವುದರಿಂದ ವನ್ಯಪ್ರಾಣಿಗಳಿಗೆ ತೊಂದರೆ ಆಗುತ್ತದೆ. ಅನೇಕ ಪ್ರಕರಣಗಳಲ್ಲಿ ವನ್ಯಪ್ರಾಣಿಗಳು ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. 2014 ರಿಂದ ಈವರೆಗೆ ಲಭ್ಯವಿರುವ ಮಾಹಿತಿಯಂತೆ ಬೆಳಗಾವಿ, ಧಾರವಾಡ, ದಾಂಡೇಲಿ ಹಾಗೂ ಹಳಿಯಾಳದ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ 60ಕ್ಕೂ ಅಧಿಕ ಪ್ರಾಣಿಗಳು ಸಾವನ್ನಪ್ಪಿವೆ. ಇದರಲ್ಲಿ 2 ಆನೆ, 49 ಕಾಡುಕೋಣ ಸೇರಿ ಕರಡಿ, ಕಾಡುನಾಯಿ, ಕಾಡುಹಂದಿಗಳು, ಜಿಂಕೆಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅರ್ಜಿದಾರರ ಮನವಿ
ವನ್ಯ ಜೀವಿಗಳಿಗೆ ಹಾನಿಯಾಗಬಾರದೆಂದೇ ಬೆಳಗಾವಿ-ಧಾರವಾಡ ಜಿÇÉೆಗಳ ನಡುವಿನ ರೈಲು ಮಾರ್ಗಕ್ಕೆ ಪರ್ಯಾಯವಾಗಿ ಕಿತ್ತೂರು ಮೂಲಕ ಹಾದು ಹೋಗುವ ಮಾರ್ಗವನ್ನು ರೂಪಿಸಲಾಗಿದೆ. ಆದೇ ರೀತಿ ಹೊಸಪೇಟೆ-ವಾಸ್ಕೋ ಮತ್ತು ಲೋಂಡಾ-ಮೀರಜ್ ಮಾರ್ಗಗಳಿಗೂ ಪರ್ಯಾಯ ಮಾರ್ಗ ರೂಪಿಸಲು ಕ್ರಮ ಕೈಗೊಳ್ಳಲು ರೈಲ್ವೇ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ದೇಶದ ಎಲ್ಲ ದಟ್ಟಾರಣ್ಯಗಳಲ್ಲಿ ರೈಲುಗಳ ವೇಗವನ್ನು ಕಡಿತಗೊಳಿಸಬೇಕೆಂದು 2013ರಲ್ಲಿ ರೈಲ್ವೆ ಇಲಾಖೆಗೆ ಆದೇಶ ನೀಡಿದ್ದು, ವೇಗ ಕಡಿಮೆ ಮಾಡದಿದ್ದರೆ ಚಾಲಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆದೇಶಿಸಿದೆ. ಆದರೆ ಆದೇಶ ಪಾಲನೆಯಾಗಿಲ್ಲ. ಹೊಸಪೇಟೆ-ವಾಸ್ಕೋ ಹಾಗೂ ಲೋಂಡಾ-ಮೀರಜ್ ಮಾರ್ಗದಲ್ಲಿ ರೈಲು ಡಿಕ್ಕಿ ಹೊಡೆದು ಪ್ರಾಣಿಗಳು ಸಾವನ್ನಪ್ಪದಂತೆ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರೈಲ್ವೆ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಈ ಮೂಲಕ ಅರಣ್ಯ ಇಲಾಖೆ ವನ್ಯ ಜೀವಿಗಳನ್ನು ಸಂರಕ್ಷಿಸಬೇಕೆನ್ನುವ ಸಂವಿಧಾನದ ವಿಧಿ 48(ಎ) ಹೇಳಿರುವ ಮೂಲಭೂತ ಕರ್ತವ್ಯವನ್ನು ಉಲ್ಲಂ ಸಿದೆ