Advertisement

ತನಿಖೆ ವಿವರ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

11:00 PM Feb 04, 2020 | Lakshmi GovindaRaj |

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ 2019ರ ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ ಘಟನೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸು ವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

Advertisement

ಗೋಲಿಬಾರ್‌ ಘಟನೆಯನ್ನು ಎಸ್‌ಐಟಿ ತನಿಖೆಗೆ ವಹಿಸಲು ಕೋರಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಮತ್ತಿ ತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್‌ ವಾದ ಮಂಡಿಸಿ, ಮೃತ ಹಾಗೂ ಗಾಯಾಳುಗಳ ಕುಟುಂಬದ ಸದಸ್ಯರು, ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಒಂದು ಪ್ರಕರಣಕ್ಕೂ ಎಫ್ಐಆರ್‌ ದಾಖಲು ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ವರದಿ ನೀಡಿ: ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಪ್ರತಿಕ್ರಿಯಿಸಿ, ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದರು. ಆಗ, ಹಾಗಿದ್ದರೆ ಗೋಲಿಬಾರ್‌ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಎಷ್ಟು ದೂರು ದಾಖಲಾಗಿವೆ. ಆ ಪೈಕಿ ಎಷ್ಟು ದೂರುಗಳ ಸಂಬಂಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ, ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ, ತನಿಖೆ ಯಾವ ಹಂತದಲ್ಲಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿ ನೀಡುವಂತೆ ನ್ಯಾಯಪೀಠ ನಿರ್ದೇಶನ ನೀಡಿತು.

ಪೊಲೀಸರು ಪ್ರತ್ಯೇಕ ವಿಡಿಯೋ ರೆಕಾರ್ಡಿಂಗ್‌ ಮಾಡಿದ್ದರೆ, ಅದರ ಬಗ್ಗೆಯೂ ಮಾಹಿತಿ ನೀಡಬೇಕು. ಸಾರ್ವಜನಿಕರು, ಖಾಸಗಿ ವ್ಯಕ್ತಿಗಳು ಮತ್ತು ಮಾಧ್ಯಮ ಗಳು ಸೆರೆ ಹಿಡಿದಿರುವ ದೃಶ್ಯಾವಳಿ ಸಲ್ಲಿಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ (ಜಿಲ್ಲಾಧಿಕಾರಿ) ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು ಎಂದು ನ್ಯಾಯಪೀಠ ಹೇಳಿತು.

Advertisement

ಈ ಸಂಬಂಧ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನಡೆಸಿರುವ ಈವರೆಗಿನ ಪ್ರಾಥಮಿಕ ತನಿಖಾ ವರದಿಯನ್ನು ಅಡ್ವೋಕೇಟ್‌ ಜನರಲ್‌ ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ವಿವಿಧ ಹಂತಗಳಲ್ಲಿ ತನಿಖೆ ನಡೆದಿದೆ. ದಾಖಲೆ ಸಂಗ್ರಹಿಸಿ, ಸಾಕ್ಷಿ ಗುರುತಿಸಲಾಗಿದೆ. ಅದರಂತೆ, 176 ಮಂದಿಯ ವಿಚಾರಣೆ ನಡೆಯಬೇಕಿದ್ದು, ಫೆ.6ಕ್ಕೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿತ್ತು.

ಅದನ್ನು ಪರಿಶೀಲಿಸಿದ ನ್ಯಾಯಪೀಠ, ಈ ವರದಿಯನ್ನು ಮುಚ್ಚಿದ ಲಕೋಟೆ ಯಲ್ಲಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಸುಪರ್ದಿಗೆ ನೀಡುವಂತೆ ಸೂಚಿಸಿತು. ಅಲ್ಲದೇ ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿ ವರದಿ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತು.

ಪಿಐಎಲ್‌ ಅರ್ಜಿ ವಜಾ: ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕೋರಿ ಮಹಮ್ಮದ್‌ ಇಕ್ಬಾಲ್‌ ಮತ್ತು ಬಿ.ಉಮರ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠ ಇದೇ ವೇಳೆ ವಜಾಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next