ಬೆಂಗಳೂರು: ನಟೋರಿಯಸ್ ಸೀರಿಯಲ್ ಕಿಲ್ಲರ್ ಸೈನೈಡ್ ಮೋಹನನಿಗೆ, ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ
ಗಲ್ಲುಶಿಕ್ಷೆ ಖಾಯಂಗೊಳಿಸಿ ಹೈಕೋರ್ಟ್ ಬುಧವಾರ ತೀರ್ಪು ನೀಡಿದೆ.
2008ರಲ್ಲಿ ನಡೆದಿದ್ದ ಸುಳ್ಯ ತಾಲೂಕಿನ ಪೆರದಾಜೆ ಗ್ರಾಮದ ಸುನಂದಾ ಕೊಲೆ ಪ್ರಕರಣದ ಆರೋಪಿ ಸೈನೈಡ್ ಮೋಹನನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ಕೋರ್ಟ್ ವಿಧಿಸಿದ್ದ ಗಲ್ಲುಶಿಕ್ಷೆ ಖಾಯಂಗೊಳಿಸಿರುವ ನ್ಯಾಯಮೂರ್ತಿ ರವೀ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಆರೋಪಿ ಸೈನೈಡ್ ಮೋಹನ ತರದ ವ್ಯಕ್ತಿಗಳು ಸಮಾಜಕ್ಕೆ ಕಂಟಕ ಎಂದು ಅಭಿಪ್ರಾಯಪಟ್ಟಿದೆ.
ಗಲ್ಲುಶಿಕ್ಷೆ ಖಾಯಂ ಗೊಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ, ಮೋಹನ್, 20 ಮುಗª ಮಹಿಳೆಯರನ್ನು ಮದುವೆಯಾಗಿ ನಂಬಿಸಿ ಸೈನೈಡ್ ಕೊಟ್ಟು ಕೊಲೆಗೈದ ಆರೋಪ ಎದುರಿಸುತ್ತಿದ್ದಾನೆ. ಅಲ್ಲದೆ ಮಹಿಳೆಯನ್ನು ಕೊಲೆಗೈದ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಪ್ರಾಸಿಕ್ಯೂಶನ್ ಸಲ್ಲಿಸಿರುವ ಸಾಕ್ಷ್ಯಾಧಾರಗಳು ಸೂಕ್ತವಾಗಿವೆ.ಆರೋಪಿಯು ಸೈಕೋ ಮನಸ್ಥಿತಿಯನ್ನು ಹೊಂದಿದ್ದು, ಸಮಾಜದಲ್ಲಿದ್ದರೆ ಕಂಟಕವಾಗುವ ಸಾಧ್ಯತೆಯಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.