ಧಾರವಾಡ: ಬಿಜೆಪಿ ವಿಧಿಸಿದ್ದ ವಿಪ್ ಉಲ್ಲಂಘನೆ ಮಾಡಿದ್ದ ಧಾರವಾಡ ಜಿಲ್ಲಾ ಪಂಚಾಯತಿ ನಾಲ್ವರು ಸದಸ್ಯರ ಸದಸ್ಯತ್ವವನ್ನು ಇಲ್ಲಿನ ಹೈಕೋರ್ಟ್ ಪೀಠ, ರದ್ದುಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.
ಜಿಲ್ಲೆಯ ತಬಕದಹೊನ್ನಳ್ಳಿ ಕ್ಷೇತ್ರದ ಮಂಜವ್ವ ಹರಿಜನ, ಗರಗ ಕ್ಷೇತ್ರದ ರತ್ನಾ ಪಾಟೀಲ, ಗಳಗಿ ಕ್ಷೇತ್ರದ ಅಣ್ಣಪ್ಪ ದೇಸಾಯಿ ಹಾಗೂ ಗುಡಗೇರಿ ಕ್ಷೇತ್ರದ ಜ್ಯೋತಿ ಬೆಂತೂರ ಅವರ ಜಿ.ಪಂ. ಸದಸ್ಯತ್ವ ರದ್ದಾಗಿದೆ.
ಬಿಜೆಪಿಯ ಚೈತ್ರಾ ಶಿರೂರ ವಿರುದ್ಧ ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯನ್ನು ಬಿಜೆಪಿಯಿಂದ ಆಯ್ಕೆಯಾಗಿದ್ದ ನಾಲ್ವರು ಸದಸ್ಯರು ಬೆಂಬಲಿಸಿದ್ದರು. ಇದರಿಂದ ಬಿಜೆಪಿ ಜಿ.ಪಂ. ನಲ್ಲಿ ಅಧಿಕಾರ ಕಳೆದುಕೊಂಡಿತ್ತು. ಇದರಿಂದ ಜಿಲ್ಲಾ ಬಿಜೆಪಿಯವರು ನಾಲ್ವರು ಸದಸ್ಯರು ಪಕ್ಷದ ವಿಪ್ ಉಲ್ಲಂಘಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಆಯೋಗ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ, ಅನರ್ಹಗೊಂಡ ನಾಲ್ವರು ಸದಸ್ಯರು ಧಾರವಾಡ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾ. ಕೃಷ್ಣಕುಮಾರ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರು ಪಕ್ಷ ನೀಡಿದ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಪೀಠ, ಸದಸ್ಯರ ಮೇಲ್ಮನವಿಯನ್ನು ವಜಾಗೊಳಿಸಿ, ನಾಲ್ವರು ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.