ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿನ ಜಾಹೀರಾತು ಫಲಕಗಳನ್ನು ಅಳವಡಿಸುವ ಆಧಾರ ಕಂಬ ಅಥವಾ ಸ್ಟ್ರಕ್ಚರ್ ತೆರವಿಗೆ ಹೈಕೋರ್ಟ್ ಶನಿವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ, ಈ ಮಧ್ಯಂತರ ತಡೆಯಾಜ್ಞೆ ಅರ್ಜಿದಾರ ಕಂಪನಿಗಳಿಗೆ ಮಾತ್ರ ಅನ್ವಯವಾಗಲಿದೆ.
ಸಾರ್ವಜನಿಕ ಸ್ಥಗಳಲ್ಲಿ ಜಾಹಿರಾತು ಫಲಕಗಳನ್ನು ಹಾಕುವ ಆಧಾರ ಕಂಬ ಅಥವಾ ಸ್ಟ್ರಕ್ಚರ್‌ಗಳನ್ನು ತೆರವುಗೊಳಿಸದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಜಾಹೀರಾತು ಏಜೆನ್ಸಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ಅವರಿದ್ದ ನ್ಯಾಯಪೀಠ, ಈ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಸೆ.17ಕ್ಕೆ ಮುಂದೂಡಿತು.
ಶನಿವಾರ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಜಾಹಿರಾತು ಫಲಕಗಳನ್ನು ಅಳವಡಿಸಲು ಆಧಾರವಾಗಿರುವ ಸ್ಟ್ರಕ್ಚರ್‌ಗಳನ್ನು ತೆಗೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ಅವುಗಳನ್ನು ತೆರವುಗೊಳಿಸದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿದರು.
ಇದಕ್ಕೆ ಆಕ್ಷೇಪಿಸಿದ ಬಿಬಿಎಂಪಿ ಪರ ವಕೀಲರು, ಬಿಬಿಎಂಪಿ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಜೀವ ರಕ್ಷಣೆ ದೃಷ್ಟಿಯಿಂದ “ಕರ್ನಾಟಕ ಸಾರ್ವಜನಿಕ ಸ್ಥಳಗಳ ವಿರೂಪ ತಡೆ ಕಾಯ್ದೆ’ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿನ ಜಾಹಿರಾತು ಫಲಕ ಹಾಕುವ ಕಂಬ, ಸ್ಟ್ರಕ್ಚರ್‌ಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪಾಲಿಕೆ ಕ್ರಮವನ್ನು ಸಮರ್ಥಿಸಿಕೊಂಡರು.
ವಾದ-ಪ್ರತಿ ವಾದ ಆಲಿಸಿದ ನ್ಯಾಯಪೀಠ, ಸಾರ್ವಜನಿಕ ಸ್ಥಳಗಳಲ್ಲಿನ ಜಾಹೀರಾತು ಫಲಕಗಳನ್ನು ಹಾಕುವ ಆಧಾರ ಕಂಬ ಅಥವಾ ಸ್ಟ್ರಕ್ಚರ್‌ಗಳನ್ನು ತೆರವುಗೊಳಿಸದಂತೆ ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿತು.