Advertisement

ಮಹಿಳೆಯ ವಿವಸ್ತ್ರ ಪ್ರಕರಣ: ವೈದ್ಯರ ಅನುಮತಿ ಇಲ್ಲದೆ ಸಂತ್ರಸ್ತೆ ಭೇಟಿಗೆ ಹೈಕೋರ್ಟ್‌ ನಿರ್ಬಂಧ

11:29 PM Dec 16, 2023 | Team Udayavani |

ಬೆಂಗಳೂರು: ಮಹಿಳೆಯನ್ನು ವಿವಸ್ತ್ರಗೊಳಿಸಿ ವಿದ್ಯುತ್‌ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ಆಸ್ಪತ್ರೆಯ ಉಸ್ತುವಾರಿ ವೈದ್ಯಾಧಿಕಾರಿ ಅಥವಾ ಚಿಕಿತ್ಸೆ ನೀಡುವ ವೈದ್ಯರ ಪೂರ್ವ ಲಿಖೀತ ಅನುಮತಿ ಪಡೆಯದೆ ಸಂತ್ರಸ್ತೆಯನ್ನು ಯಾವುದೇ ವ್ಯಕ್ತಿ, ಗುಂಪುಗಳು, ಸಂಘಗಳು, ರಾಜಕೀಯ ಪಕ್ಷಗಳು ಭೇಟಿ ಮಾಡುವಂತಿಲ್ಲ ಎಂದು ಹೈಕೋರ್ಟ್‌ ನಿರ್ದೇಶಿಸಿದೆ.
ಮಾಧ್ಯಮಗಳಲ್ಲಿ ಸಂತ್ರಸ್ತೆಯನ್ನು ರಾಜಕೀಯ ಪಕ್ಷದ ನಾಯಕರು ಭೇಟಿಯಾಗುತ್ತಿರುವ ವರದಿ ಪ್ರಸಾರವಾದದ್ದನ್ನು ಗಮನಿಸಿ ಪ್ರಕರಣದ ರಜಾ ದಿನವಾಗಿದ್ದರೂ ತಮ್ಮ ಕೊಠಡಿಯಲ್ಲಿ ಪ್ರಕರಣದ ತುರ್ತು ವಿಚಾರಣೆ ನಡೆಸಿದ ಮುುಖ್ಯ ನ್ಯಾ| ಪ್ರಸನ್ನ ಬಿ. ವರಾಳೆ ಮತ್ತು ನ್ಯಾ| ಕೃಷ್ಣ ದೀಕ್ಷಿತ್‌ ಅವರನ್ನು ಒಳಗೊಂಡಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

Advertisement

ಸಂತ್ರಸ್ತೆಯ ಕುಟುಂಬ ಸದಸ್ಯರು, ಆಯೋಗಗಳು, ತನಿಖಾ ಸಂಸ್ಥೆಗಳು ಮಾತ್ರ ಸಂತ್ರಸ್ತೆಯನ್ನು ಭೇಟಿ ಮಾಡಬಹುದಾಗಿದೆ. ನೊಂದಿರುವ ಸಂತ್ರಸ್ತೆಯ ಹಿತದೃಷ್ಟಿಯಿಂದ ಹಾಗೂ ಆಕೆಗೆ ಸೂಕ್ತ ಚಿಕಿತ್ಸೆ ನೀಡುವಾಗ ಸಮಸ್ಯೆ ಆಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಕೋರ್ಟ್‌ ಸಾಮಾನ್ಯವಾಗಿ ವ್ಯಕ್ತಿಗಳ ಸ್ವಾತಂತ್ರ್ಯ ನಿರ್ಬಂಧಿಸುವುದಿಲ್ಲ. ಆದರೆ ಸಂತ್ರಸ್ತೆ ಅನುಭವಿಸಿದ ಆಘಾತದ ಬಗ್ಗೆ ತೀವ್ರ ಸಂಕಟ ಮತ್ತು ನೋವನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ಹೊರಡಿಸಿದೆ ಎಂದು ನ್ಯಾಯಪೀಠ ಹೇಳಿದೆ.

ಈ ಆದೇಶವನ್ನು ಪಾಲಿಸುವುದಾಗಿ ಸರಕಾರದ ಅಡಿಷನಲ್‌ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ನ್ಯಾಯಲಯಕ್ಕೆ ಭರವಸೆ ನೀಡಿದ್ದಾರೆ.ಗುರುವಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇದೊಂದು ಅಸಾಮಾನ್ಯ ಪ್ರಕರಣವಾಗಿದ್ದು, ಇದನ್ನು ಅಸಾಮಾನ್ಯ ರೀತಿಯಲ್ಲಿ ಹೈಕೋರ್ಟ್‌ ನಿರ್ವಹಿಸಲಿದೆ ಎಂದು ಮುಖ್ಯ ನ್ಯಾಯಾಮೂರ್ತಿಗಳು ಹೇಳಿದ್ದರು. ಸೋಮವಾರ ಪ್ರಕರಣದ ಮುಂದಿನ ವಿಚಾರಣೆಯಿದ್ದು ಅಂದು ವಿವರವಾದ ಹೆಚ್ಚುವರಿ ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕು ಮತ್ತು ಬೆಳಗಾವಿಯ ಪೊಲೀಸ್‌ ಆಯುಕ್ತರು ಮತ್ತು ಉಪ ಪೊಲೀಸ್‌ ಆಯುಕ್ತರು ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.

ರಾಜ್ಯ ಹೈಕೋರ್ಟ್‌ನ ನಿರ್ಬಂಧದ ಹೊಗಿಯೂ ದುರುಳರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಬೆಳಗಾವಿಯ ಸಂತ್ರಸ್ತ ಮಹಿಳೆಯನ್ನು ಭೇಟಿಮಾಡುವ ಮೂಲಕ ಬಿಜೆಪಿ ನಾಯಕರು ನ್ಯಾಯಾಲಯದ ಸೂಚನೆಯನ್ನು ಉಲ್ಲಂ ಸಿ ಅಗೌರವಿಸಿರುವುದು ಮಾತ್ರವಲ್ಲದೆ, ತಮ್ಮ ಅಸೂಕ್ಷ್ಮತೆಯನ್ನು ಮೆರೆದಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದು, ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು, ಜಿಲ್ಲಾ ಮಂತ್ರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆದರೂ ಬಿಜೆಪಿ ಅವರಿಗೆ ರಾಜಕೀಯ ಮಾಡಬೇಕು. ಅದಕ್ಕಾಗಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ.
-ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ

ವಿವಿಧೆಡೆ ಬಿಜೆಪಿ ಪ್ರತಿಭಟನೆ
ಬೆಳಗಾವಿ ಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆಸಿರುವ ಅಮಾನುಷ ಪ್ರಕರಣ ಹಾಗೂ ಮಂಡ್ಯದಲ್ಲಿ ನಡೆದಿರುವ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಬಿಜೆಪಿಯು ಶನಿವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿತು.

ವಿಪಕ್ಷ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಶೋಕ್‌, ಬೆಳಗಾವಿಯ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡದೆ ಸರಕಾರ ಮೋಸ ಮಾಡಿದೆ. ಸಭಾಧ್ಯಕ್ಷರು ಮಲತಾಯಿ ಧೋರಣೆ ತೋರಿದರು ಎಂದು ಆರೋಪಿಸಿದರು.

ಎಲ್ಲೆಲ್ಲಿ ಪ್ರತಿಭಟನೆ?
ಬಿಜೆಪಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕದಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ತುಮಕೂರು ನಗರದಲ್ಲೂ ಟೌನ್‌ ಹಾಲ್‌ನ ಬಿಜಿಎಸ್‌ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಮಂಗಳೂರು, ಕಾರವಾರ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ಚಿತ್ರದುರ್ಗ, ಧಾರವಾಡ ಮುಂತಾದೆಡೆ ಪ್ರತಿಭಟನೆ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next