ನೈನಿತಾಲ್: ಕೊರೊನಾ ಮತ್ತೆ ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ; ಮುಂಬರುವ ಚಾರ್‌ಧಾಮ್ ಯಾತ್ರೆಗೆ, ಉತ್ತರಾಖಂಡ ಸರ್ಕಾರ ಈಗಲೇ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು ಸಿದ್ಧಪಡಿಸಬೇಕು ಎಂದು ಅಲ್ಲಿನ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಪ್ರಸ್ತುತ ನಡೆಯುತ್ತಿರುವ ಕುಂಭಮೇಳದಲ್ಲಿ ಆಗಿರುವ ಎಡವಟ್ಟುಗಳು ಇಲ್ಲಿ ಪುನರಾವರ್ತನೆಯಾಗಬಾರದು ಎಂಬ ಕಠಿಣ ಸಂದೇಶವನ್ನು ರವಾನಿಸಿದೆ. ಹರಿದ್ವಾರದ ಕುಂಭಮೇಳದ ಪ್ರಯುಕ್ತ ನಡೆದ ಎರಡು ಅಮಾವಾಸ್ಯಾ ಪುಣ್ಯಸ್ನಾನಗಳಲ್ಲಿ (ಶಾಹಿ ಸ್ನಾನ) ಅಂದಾಜು 48.51 ಲಕ್ಷ ಮಂದಿ ಭಾಗವಹಿಸಿದ್ದರು. ಅಲ್ಲಿ ಮುಲಾಜಿಲ್ಲದೇ ಕೊರೊನಾ ನೀತಿಸಂಹಿತೆಗಳನ್ನು ಉಲ್ಲಂಘಿಸಲಾಗಿತ್ತು. ಪರಿಣಾಮ ಸಾವಿರಾರು ಮಂದಿಗೆ ಕೊರೊನಾ ಹರಡಿತ್ತು. ಪರಿಸ್ಥಿತಿಯನ್ನು ನೋಡಿ ಸ್ವತಃ ನರೇಂದ್ರ ಮೋದಿಯೇ ಮಧ್ಯಪ್ರವೇಶಿಸಿ ಸಾಧುಸಂತರಿಗೆ ಮನವಿ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ಹಲವು ಅಖಾಡಗಳು ಕುಂಭಮೇಳದಿಂದ ಹಿಂದೆ ಸರಿದಿವೆ.
ಇದನ್ನೂ ಓದಿ :ರಾಜ್ಯದಲ್ಲಿ ಇಂದು 23558 ಕೋವಿಡ್ ಕೇಸ್ ಪತ್ತೆ : 116 ಸಾವು!
ನ್ಯಾಯಾಲಯದ ಸೂಚನೆಗಳೇನು?: ಕೊರೊನಾ ಪರೀಕ್ಷೆಗಳನ್ನು ರಾಜ್ಯಸರ್ಕಾರ ಹೆಚ್ಚಿಸಬೇಕು. ದೂರದ ಸ್ಥಳಗಳಿಗೆ ಮೊಬೈಲ್ ವ್ಯಾನ್‌ಗಳ ಮೂಲಕ ತೆರಳಿ ಪರೀಕ್ಷೆ ನಡೆಸಬೇಕು. ಕೊರೊನಾ ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹೆಚ್ಚುವರಿ ಪಿಪಿಇ ಕಿಟ್‌ಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು. ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷಾ ಸಾಧನೆಗಳನ್ನು ಒದಗಿಸಬೇಕು.
ಕೇಂದ್ರ ಸಂಸ್ಥೆಗಳ ನೆರವು ಪಡೆದು ತಾತ್ಕಾಲಿಕ ಕೊರೊನಾ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಸರ್ಕಾರಿ ಆಸ್ಪತ್ರೆಗಳು ಸಿಟಿ ಸ್ಕ್ಯಾನ್‌ಗಳಿಂದ ಸುಸಜ್ಜಿತಗೊಂಡಿರಬೇಕು, ಖಾಸಗಿ ಆಸ್ಪತ್ರೆಗಳು ಬಿಪಿಎಲ್ ಕಾರ್ಡ್ ಹೊಂದಿರುವ ಬಡವರಿಗೆ ಶೇ.25ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಇವೆಲ್ಲವನ್ನು ಪರಿಶೀಲಿಸಿ, ಈ ಕುರಿತು ಏನೇನು ಮಾಡಲಾಗಿದೆ ಎನ್ನುವುದನ್ನು ಮೇ 10ರ ವಿಚಾರಣೆಯಲ್ಲಿ ವರದಿ ನೀಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.