Advertisement

ಹೊಸ ಪದ್ಧತಿಯಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೈಕೋರ್ಟ್‌ ಅಸ್ತು

03:45 AM Mar 09, 2017 | |

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಪದ್ಧತಿ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡುವೆ ಇದ್ದ ಗೊಂದಲಕ್ಕೆ ಹೈಕೋರ್ಟ್‌ ಬುಧವಾರ ತೆರೆ ಎಳೆದಿದ್ದು, ಪರೀಕ್ಷಾ ಮಂಡಳಿಯು ತೀರ್ಮಾನಿಸಿರುವಂತೆ ಹೊಸ ಪದ್ಧತಿಯಲ್ಲೇ ವಾರ್ಷಿಕ ಪರೀಕ್ಷೆ ನಡೆಸಲು ಅಸ್ತು ಎಂದಿದೆ.

Advertisement

ಹೊಸ ಪರೀಕ್ಷಾ ಪದ್ಧತಿ ಕುರಿತು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ 10ನೇ ತರಗತಿಯಲ್ಲಿ ಓದುತ್ತಿರುವ ನಗರದ 34 ವಿದ್ಯಾರ್ಥಿಗಳ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್‌. ಸುಜಾತ ಅವರಿದ್ದ ಏಕಸದಸ್ಯಪೀಠ, ಪರೀಕ್ಷಾ ಮಂಡಳಿ ಅಧಿಸೂಚನೆ ಎತ್ತಿ ಹಿಡಿಯುವ ಮೂಲಕ ಅರ್ಜಿ ವಜಾಗೊಳಿಸಿತು.ಪ್ರಸಕ್ತ ಶೈಕ್ಷಣಿಕ ವರ್ಷದ ಮಾರ್ಚ್‌-ಏಪ್ರಿಲ್‌ನಲ್ಲಿ ನಡೆಯಲಿರುವ 10ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ಹೊಸ ಪದ್ಧತಿಯಂತೆ (ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪ್ರತ್ಯೇಕವಾಗಿ ನೀಡುವುದು) ನಡೆಸಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2016ರ ಡಿಸೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿತ್ತು.

ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳ ಪೋಷಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಪರೀಕ್ಷಾ ಮಂಡಳಿಯ ತೀರ್ಮಾನಕ್ಕೆ ಮಾನ್ಯತೆ ನೀಡಿತು. ಇದೇ ವೇಳೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಹೊಸ ಪರೀಕ್ಷಾ ಪದ್ಧತಿ ಜಾರಿಗೆ ತರುವ ಮೂಲಕ ಪರೀಕ್ಷಾ ಮಂಡಳಿಯು ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಗೊಂದಲ ಮೂಡಿಸಿದೆ ಎಂಬ ಪೋಷಕರ ವಾದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠ, ಶೈಕ್ಷಣಿಕ ವರ್ಷದ ಆರಂಭದಲ್ಲೇ ಇಂತಹ ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಂಡರೆ ವಿದ್ಯಾರ್ಥಿಗಳು ಹಾಗೂ ಪೋಷಕ ವರ್ಗದಲ್ಲಿ ಮೂಡುವ ಗೊಂದಲಗಳು ಹಾಗೂ ಉಂಟಾಗುವ ಆತಂಕಗಳನ್ನು ತಪ್ಪಿಸಬಹುದು ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಕಿವಿಮಾತು ಹೇಳಿತು.

ಹೈಲೈಟ್ಸ್‌
* 34 ವಿದ್ಯಾರ್ಥಿಗಳು ಪೋಷಕರು ಸಲ್ಲಿಸಿದ ಅರ್ಜಿ.
* ವಿಚಾರಣೆ ನಡೆಸಿದ ನ್ಯಾ. ಎಸ್‌. ಸುಜಾತ ಅವರಿದ್ದ ಏಕಸದಸ್ಯಪೀಠದಿಂದ.
* ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪ್ರತ್ಯೇಕವಾಗಿ ನೀಡುವುದು ಹೊಸ ಪದ್ಧತಿಯಲ್ಲಿನ ಪ್ರಮುಖ ಅಂಶ.
* 2016ರ ಡಿಸೆಂಬರ್‌ನಲ್ಲಿ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಅಧಿಸೂಚನೆ.

Advertisement

Udayavani is now on Telegram. Click here to join our channel and stay updated with the latest news.

Next