Advertisement

ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ

11:36 PM Aug 14, 2019 | Team Udayavani |

ಬೆಂಗಳೂರು: ಬರಪೀಡಿತ ತಾಲೂಕುಗಳಲ್ಲಿ ಗೋಶಾಲೆ ತೆರೆಯುವ ಹಾಗೂ ಜಾನುವಾರುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಮೇವು ಪೂರೈಸುವ ಸಂಬಂಧ ನ್ಯಾಯಾಲಯದ ಆದೇಶ ಪಾಲನೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಅಲ್ಲದೇ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ಪ್ರಮಾಣದಲ್ಲಿ ಮೇವು ಪೂರೈಸಲಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ತಪಾಸಣೆ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಅದಕ್ಕಾಗಿ, 109 ಗೋಶಾಲೆಗಳ ಪೈಕಿ ಆಯ್ದ 10 ಗೋಶಾಲೆಗಳ ಪಟ್ಟಿ ನೀಡುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು.

ಹೈಕೋರ್ಟ್‌ ಕಾನೂನು ಸೇವಾ ಸಮಿತಿ ಹಾಗೂ ತುಮಕೂರಿನ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ನಿವಾಸಿ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್‌. ಓಕಾ ಹಾಗೂ ನ್ಯಾ. ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಹೈಕೋರ್ಟ್‌ ಆದೇಶದಂತೆ ಕೈಗೊಂಡ ಕ್ರಮಗಳ ಅನುಪಾಲನಾ ವರದಿಯನ್ನು ಸಲ್ಲಿಸಿದರು.

ವರದಿ ಗಮನಿಸಿದ ನ್ಯಾಯಪೀಠ, ಬರಪೀಡಿತ ಎಂದು ಘೋಷಿಸಲಾದ 156 ತಾಲೂಕುಗಳಲ್ಲಿ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಗೋಶಾಲೆ ತೆರೆಯಬೇಕು ಎಂದು 2019ರ ಮೇ 3 ಹಾಗೂ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಎದುರಿಸುತ್ತಿರುವ 56 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆ ತಾಲೂಕುಗಳಲ್ಲೂ ತಲಾ ಒಂದೊಂದು ಗೋಶಾಲೆ ತೆರೆಯುವಂತೆ ಮತ್ತು ಎಲ್ಲ ಗೋಶಾಲೆಗಳಲ್ಲಿ ಪ್ರತಿ ಜಾನುವಾರುಗೆ 6 ಕೆ.ಜಿ ಒಣ ಮೇವು, 18 ಕೆ.ಜಿ ಹಸಿರು ಮೇವು ಹಾಗೂ 1 ಕೆ.ಜಿ ಪಶು ಆಹಾರ ಪೂರೈಸಬೇಕು ಎಂದು 2019ರ ಜು.22ರಂದು ನೀಡಿದ ಆದೇಶದಂತೆ ಅನುಪಾಲನಾ ವರದಿ ಇಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಬರಪೀಡಿತ ತಾಲೂಕುಗಳ ಪೈಕಿ 109 ತಾಲೂಕುಗಳಲ್ಲಿ ಗೋಶಾಲೆಗಳನ್ನು ತೆರೆಯ ಲಾಗಿದೆ. ಮೇವು ಪೂರೈಕೆಗೆ ಪ್ರತಿ ಜಾನುವಾರುಗೆ ಪ್ರತಿ ದಿನಕ್ಕೆ 80 ರೂ. ವೆಚ್ಚಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂಬ ಸರ್ಕಾರದ ಅನುಪಾಲನಾ ವರದಿಯಲ್ಲಿನ ಅಂಶಗಳಿಗೆ ಗರಂ ಆದ ನ್ಯಾಯಪೀಠ, ಆದೇಶ ಪಾಲನೆ ಮಾಡುವಂತೆ ಸೂಚಿಸಿತ್ತು. ಸರ್ಕಾರಕ್ಕೆ ಮನಸೋ ಇಚ್ಛೆ ಮಾಡುವಂತೆ ತಿಳಿಸಿರಲಿಲ್ಲ ಎಂದು ಚಾಟಿ ಬೀಸಿತು.

Advertisement

ಅಫಿಡವಿಟ್‌ ಸಲ್ಲಿಸಿ: ಈ ಮಧ್ಯೆ, 80 ತಾಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದರು. ನ್ಯಾಯಾಲಯದ ಆದೇಶದಂತೆ ಸರ್ಕಾರದ ಅನುಪಾಲನಾ ವರದಿ ಯಾಕಿಲ್ಲ ಅನ್ನುವುದಕ್ಕೆ ವಿವರಣೆ ಸೇರಿದಂತೆ 56 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆಯೇ? ಈಗ ಪ್ರವಾಹ ಪೀಡಿತ ಮತ್ತು ಬರಪೀಡಿತ ಎಂದು ಘೋಷಿಸಿದ್ದ ತಾಲೂಕುಗಳು ಎಷ್ಟಿವೆ? ಎಂಬುದರ ಬಗ್ಗೆ ಆ.16ರೊಳಗೆ ಪ್ರಮಾಣಪತ್ರ ಸಲ್ಲಿಸಲು ನ್ಯಾಯಪೀಠ ಸೂಚಿಸಿತು.

343 ಗೋಶಾಲೆ – ಸರ್ಕಾರದಿಂದ ಪ್ರಮಾಣಪತ್ರ: ಕಳೆದ ಹಿಂಗಾರು ಹಂಗಾಮಿನಲ್ಲಿ ಬರಪೀಡಿತ ಎಂದು ಘೋಷಿಸಲಾಗಿದ್ದ 156 ತಾಲೂಕುಗಳಲ್ಲಿ 109 ತಾಲೂಕುಗಳಲ್ಲಿ ಕನಿಷ್ಠ ಒಂದೊಂದು ಗೋಶಾಲೆ ತೆರೆಯಲಾಗಿದೆ. ಅಲ್ಲದೇ ಹೈಕೋರ್ಟ್‌ ಆದೇಶದಂತೆ 2019ರ ಆ.12ರಂತೆ 65 ಗೋಶಾಲೆಗಳನ್ನು ತೆರೆಯಲಾಗಿದೆ. ಪ್ರವಾಹ ಪೀಡಿತ ತಾಲೂಕುಗಳಲ್ಲಿ 236 ಗೋಶಾಲೆಗಳನ್ನು ತೆರೆಯಲಾಗಿದೆ.

ಬರಪೀಡಿತ ಹಾಗೂ ಇತರೆ ತಾಲೂಕುಗಳಲ್ಲಿ 42 ಗೋಶಾಲೆಗಳನ್ನು ತೆರೆಯಲಾಗಿದೆ. ಈ ರೀತಿ ರಾಜ್ಯದಲ್ಲಿ ಒಟ್ಟು 343 ಗೋಶಾಲೆ ತೆರೆಯಲಾಗಿದ್ದು, 160 ಮೇವು ಬ್ಯಾಂಕುಗಳನ್ನು ಆರಂಭಿಸಲಾಗಿದೆ ಎಂದು ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವೆಗಳ ಇಲಾಖೆಯ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರು ಆ.14ರಂದು ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next