Advertisement
“ಕೋರ್ಟ್ ಆದೇಶ ಕೊಟ್ಟಿದ್ದು ಅದನ್ನು ಪಾಲನೆ ಮಾಡಲು. ಅದು ಬಿಟ್ಟು ರಾಜಕಾರಣಿಗಳು (ಮೇಯರ್, ಉಪಮೇಯರ್, ಆಡಳಿತ ಪಕ್ಷದ ನಾಯಕರು) ಸಭೆ ಸೇರಿ ಕೋರ್ಟ್ ಆದೇಶದ ಬಗ್ಗೆ ಚರ್ಚಿಸುತ್ತಾರೆ ಎಂದರೆ ಏನರ್ಥ, ಕೋರ್ಟ್‌ನ ಘನತೆ ಹಾಗೂ ಪ್ರತಿಷ್ಠೆಯ ವಿಚಾರ ಬಂದಾಗ ರಾಜಿಯ ಪ್ರಶ್ನೆಯೇ ಇಲ್ಲ. ಮೂವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿ ಕಟಕಟೆಯಲ್ಲಿ ನಿಲ್ಲಿಸುವುದು ದಿಟ’ ಎಂದು ಹೈಕೋರ್ಟ್ ಗುಡುಗಿತು.
Related Articles
Advertisement
ಹಾಗಾಗಿ, ಈ ಕ್ಷಣ ಅವರ ಹೆಸರುಗಳನ್ನು ಕೊಡಿ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಬಿಬಿಎಂಪಿ ಪರ ವಕೀಲರಿಗೆ ಸೂಚನೆ ನೀಡಿತು. ಆಗ, ಕೋರ್ಟ್ ಹಾಗೂ ಅದರ ಆದೇಶಗಳ ಬಗ್ಗೆ ಪಾಲಿಕೆ ಅತ್ಯಂತ ಗೌರವ ಇಟ್ಟುಕೊಂಡಿದೆ. ಮೇಯರ್ ಹಾಗೂ ಇತರರು ಸಭೆ ನಡೆಸಿದ್ದು ಕೋರ್ಟ್ ಆದೇಶದ ಪಾಲನೆ ವಿಚಾರದಲ್ಲಿ ಇಲ್ಲ. ಪರಿಹಾರ ನೀಡುವ ನಿಯಮಗಳ ಕುರಿತು ಸಭೆ ನಡೆಸಿದ್ದು.
ಅಷ್ಟಕ್ಕೂ ಪಾಲಿಕೆಯ ಆರ್ಥಿಕ ಸ್ಥಿತಿ ಕುಸಿದಿದೆ. ಮೇಲಾಗಿ, ರಸ್ತೆ ಗುಂಡಿಗಳಿಂದ ಅಪಘಾತವಾಗಿ ಗಾಯಗೊಂಡವರಿಗೆ ಪರಿಹಾರ ನೀಡಲು ಕೆಎಂಸಿ ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿಲ್ಲ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಒಂದು ವಾರ ಕಾಲಾವಕಾಶ ಕೊಡಿ ವಿವರಣೆಯೊಂದಿಗೆ ಕೋರ್ಟ್ ಮುಂದೆ ಬರುತ್ತೇನೆ ಎಂದು ಬಿಬಿಎಂಪಿ ಪರ ವಕೀಲರು ಮನವಿ ಮಾಡಿದರು.
ಅದಕ್ಕೆ, ಒಂದು ವಾರ ಅಲ್ಲ, ಒಂದು ದಿನ ಸಹ ಸಮಯ ಕೊಡಲ್ಲ. ಈಗಾಗಲೇ ಸಾಕಷ್ಟು ಸಮಯ ಕೊಟ್ಟಾಗಿದೆ. ಅಲ್ಲದೇ ಇದೇ ವಿಚಾರವಾಗಿ ಮೂರು ಆದೇಶಗಳನ್ನು ಮಾಡಲಾಗಿದೆ. ಈಗ ಕಾಲಾವಕಾಶ ನೀಡುವ ಪ್ರಶ್ನೆಯೇ ಇಲ್ಲ, ಇನ್ನೇನಿದ್ದರೂ ಹೈಕೋರ್ಟ್ ತನ್ನ ಅಧಿಕಾರ ಚಲಾಯಿಸಬೇಕಷ್ಟೇ. ನಮ್ಮ ಆದೇಶ ಸುಪ್ರೀಂನಲ್ಲಿ ಪ್ರಶ್ನಿಸಿದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಅದು ನಿಮ್ಮ ಹಕ್ಕು.
ಬೇಕಿದ್ದರೆ ನಮ್ಮ ಆದೇಶವನ್ನೂ ಸುಪ್ರೀಂಕೋರ್ಟ್ ರದ್ದುಗೊಳಿಸಲಿ ನಮಗೇನು ಅಭ್ಯಂತರವಿಲ್ಲ. ಆದರೆ, ಕೋರ್ಟ್ ಆದೇಶಗಳ ವಿಚಾರದಲ್ಲಿ ಬಿಬಿಎಂಪಿ ನಡೆದುಕೊಳ್ಳುತ್ತಿರುವ ರೀತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಗುರುವಾರ ಬೆಳಿಗ್ಗೆ 10.30ಕ್ಕೆ ಮೇಯರ್, ಉಪ ಮೇಯರ್, ಆಡಳಿತ ಪಕ್ಷದ ನಾಯಕರ ಹೆಸರು ಕೊಡಿ, ಮುಂದೇನು ಮಾಡಬೇಕು ಎಂದು ನಾವು (ಕೋರ್ಟ್) ನಿರ್ಧರಿಸುತ್ತದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ವಿಚಾರಣೆ ಮುಂದೂಡಿದರು.
ಅಫಿಡವಿಟ್ ಅಲ್ಲ, ನಿರ್ಣಯ ಹಿಂಪಡೆಯಿರಿ: ಈ ಮಧ್ಯೆ ತಾವು ಸಲ್ಲಿಸಿದ ಅಫಿಡವಿಟ್ ವಾಪಸ್ ಪಡೆಯುವುದಾಗಿ ಬಿಬಿಎಂಪಿ ಪರ ವಕೀಲರು ಹೇಳಿದರು. ಅದಕ್ಕೆ, ನೀವು ಅಫಿಡವಿಟ್ ವಾಪಸ್ ಪಡೆದು ಕೊಂಡಿರುವುದರಿಂದ ಕೋರ್ಟ್ ಆದೇಶದ ಉದ್ದೇಶ ಸಾಕಾರಗೊಳ್ಳುವುದಿಲ್ಲ. ಅಫಿಡವಿಟ್ ವಾಪಸ್ ಪಡೆದುಕೊಂಡರೂ, ಪಾಲಿಕೆ ತೀರ್ಮಾನ ಹಾಗೆಯೇ ಉಳಿಯುತ್ತದೆ. ಹಾಗಾಗಿ, ಕೋರ್ಟ್ ಆದೇಶದ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಯಬೇಕಿದೆ ಎಂಬ ನಿರ್ಣಯ ವಾಪಸ್ ಪಡೆಯಿರಿ, ಬಳಿಕ ಅಫಿಡವಿಟ್ ಬಗ್ಗೆ ಮಾತನಾಡಿ ಎಂದು ನ್ಯಾಯಪೀಠ ತಾಕೀತು ಮಾಡಿತು.
ಕಾಯ್ದೆಯಲ್ಲಿ ರಸ್ತೆ ಗುಂಡಿಗೆ ಅವಕಾಶವಿದೆಯೇ?: ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಗಾಯಗೊಂಡವರಿಗೆ ಪರಿಹಾರ ನೀಡಲು ಕರ್ನಾಟಕ ಮುನ್ಸಿಪಲ್ ಕಾಯ್ದೆ ಮತ್ತು ಅಧಿನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಬಿಬಿಎಂಪಿ ಪರ ವಕೀಲರ ಹೇಳಿಕೆಗೆ ಗರಂ ಆದ ಮುಖ್ಯ ನ್ಯಾಯಮೂರ್ತಿ, ಪರಿಹಾರ ಕೊಡಲು ಅವಕಾಶ ಇಲ್ಲ ಎಂದಾರೆ ರಸ್ತೆ ಗುಂಡಿಗಳು ಹಾಗೂ ಅಕ್ರಮ ಕಟ್ಟಡಗಳಿಗೆ ಕಾಯ್ದೆಯಲ್ಲಿ ಅವಕಾಶ ಇದೆಯೇ ಇರಬೇಕು ಎಂದು ತೀಕ್ಷ್ಣವಾಗಿ ಹೇಳಿದರು.