ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಾನೂನು ಘಟಕದಲ್ಲಿ ಖಾಲಿಯಿರುವ ವಕೀಲರ (ಕಾನೂನು ಸಲಹೆಗಾರರು) ಹುದ್ದೆಗಳನ್ನು ಭರ್ತಿ ಮಾಡಬೇಕು. ಅಲ್ಲದೆ, ಬಿಬಿಎಂಪಿಗೆ ಸಂಬಂಧಿಸಿದ ವ್ಯಾಜ್ಯಗಳ ವಿಚಾರಣೆ ವೇಳೆ ವಕೀಲರು ಹಾಜರಾಗುವಂತೆ ಸಂಬಂಧಪಟ್ಟ ಕಾನೂನು ಘಟಕದ ವಕೀಲರಿಗೆ (ಪ್ಯಾನಲ್ ಅಡ್ವೋಕೇಟ್) ನಿರ್ದೇಶಿಸಬೇಕು ಎಂದು ಹೈಕೋರ್ಟ್ ಪಾಲಿಕೆಯ ಆಯುಕ್ತರಿಗೆ ಸೋಮವಾರ ನಿರ್ದೇಶಿಸಿದೆ.
ಬಿಬಿಎಂಪಿಗೆ ಸಂಬಂಧಿಸಿದ ವ್ಯಾಜ್ಯವೊಂದರ ವಿಚಾರಣೆ ವೇಳೆ ಪಾಲಿಕೆಯ ಕಾನೂನು ಘಟಕದ ವಕೀಲರು ಗೈರು ಹಾಜರಾಗಿದ್ದುದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರ ಪೀಠವು ಪಾಲಿಕೆ ಆಯುಕ್ತರಿಗೆ ಈ ನಿರ್ದೇಶ ನೀಡಿದೆ.
ಬಿಬಿಎಂಪಿ ಅರ್ಜಿಗಳ ವೇಳೆ ಸಂಬಂಧಪಟ್ಟ ಪಾಲಿಕೆಯ ವಕೀಲರು ಗೈರಾಗಿರುವ ಬಗ್ಗೆ ವಿವರಣೆ ನೀಡುವಂತೆ ಬಿಬಿಎಂಪಿ ಕಾನೂನು ಘಟಕದ ಮುಖ್ಯಸ್ಥ ಕೆ.ಡಿ.ದೇಶಪಾಂಡೆ ಅವರಿಗೆ ಈ ಹಿಂದೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದರು. ಅದರಂತೆ ವಕೀಲ ದೇಶಪಾಂಡೆ ಸೋಮವಾರ ವಿಚಾರಣೆಗೆ ಹಾಜರಾಗಿದ್ದರು.
ಅವರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿಗಳು, “ಬಿಬಿಎಂಪಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಪಾಲಿಕೆಯ ಕಾನೂನು ಘಟಕದ ವಕೀಲರು ಹಾಜರಿರುವುದಿಲ್ಲ. ಬಿಬಿಎಂಪಿಯು ಬಹುತೇಕ ಪ್ರಕರಣಗಳಲ್ಲಿ ಪ್ರತಿವಾದಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಕೀಲರು ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ನೀಡಬೇಕು. ಇಲ್ಲವಾದರೆ ಅರ್ಜಿಗಳನ್ನು ಇತ್ಯರ್ಥಪಡಿಸಲು ನ್ಯಾಯಾಲಯಕ್ಕೆ ಕಷ್ಟಸಾಧ್ಯವಾಗುತ್ತದೆ,” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ ಅವರು ಬಿಬಿಎಂಪಿ ಕಾನೂನು ಘಟಕದಲ್ಲಿ ಸದ್ಯ 14 ಮಂದಿ ವಕೀಲರು ಇದ್ದಾರೆ. ಅವರಿಗೆ ಕೋರ್ಟ್ ಕಲಾಪಗಳಿಗೆ ಸಂಬಂಧಿಸಿದ ಜವಾಬ್ದಾರಿಯನ್ನು ವಹಿಸಲಾಗಿದೆ. ಇನ್ನು ಕಾನೂನು ಘಟಕಕ್ಕೆ ಇನ್ನಷ್ಟು ವಕೀಲರನ್ನು ನಿಯೋಜಿಸುವಂತೆ ಸಲ್ಲಿಸಿದ ಪ್ರಸ್ತಾವನೆ ಆಯುಕ್ತರ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.