ಕಾರವಾರ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ನಾಯಕರು.ಮುಂದೆ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಶನಿವಾರ ಹೇಳಿಕೆ ನೀಡಿದರು.
ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ವೈದ್ಯ, ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಗೆಲ್ಲಿಸಿಕೊಟ್ಟಿದ್ದಾರೆ. ಐದು ವರ್ಷ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಯಾರನ್ನ ಸಿಎಂ ಮಾಡಬೇಕು,ಎಷ್ಟು ವರ್ಷ ಮಾಡಬೇಕು ಎಂದು ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ಎಸ್. ಎಂ. ಕೃಷ್ಣ ಸಿದ್ದರಾಮಯ್ಯ ನವರ ಬಗ್ಗೆ ನೀಡಿರುವ ಪ್ರತಿಕ್ರಿಯೆಗೆ ವಿಚಾರವಾಗಿ ಮಾತನಾಡಿದ ಸಚಿವ ವೈದ್ಯ ಅವರು, ಮಾಜಿ ಮುಖ್ಯಮಂತ್ರಿ ಎಸ್. ಎಂ .ಕೃಷ್ಣ ಅವರು ನಮ್ಮ ಪಕ್ಷದಲ್ಲೇ ಇದ್ದವರು. ಅವರ ಅನುಭವದ ಮೇಲೆ ಸಲಹೆಯನ್ನ ನೀಡಿದ್ದಾರೆ. ಎಸ್.ಎಂ ಕೃಷ್ಣ ಅವರ ಮೇಲೆ ನಮಗೂ ಗೌರವವಿದೆ ಎಂದರು.
ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈಶ್ವರಪ್ಪನವರಿಗೆ ಮೊದಲು ಅವರ ಪಕ್ಷಕ್ಕೆ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಲು ತಿಳಿಸಿ. ವಿರೋಧ ಪಕ್ಷದ ನಾಯಕರೇ ಮಾಡಲು ಆಗದಿದ್ದವರು ,ನಮ್ಮ ಮೇಲೆ ಏನು ಟೀಕೆ ಮಾಡುತ್ತಾರೆ. ಅವರ ಆಡಳಿತದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಕಾರ್ಯಕರ್ತರ ವರೆಗೆ ಸುಳ್ಳು ಹೇಳುವುದೇ ಕೆಲಸ. ಈಗ ಚುನಾವಣೆ ಬರುತ್ತಿದೆ, ಈಗ ಯಾರನ್ನಾದರು ಕೊಲೆ ಮಾಡದೇ ಇದ್ದರೇ ಸಾಕು, ಎನ್ನುವ ಮೂಲಕ ಬಿಜೆಪಿ ವಿರುದ್ದ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.
ಲವ-ಕುಶ ಇದ್ದಂತೆ
ನಾನು, ಶಾಸಕ ಸತೀಶ ಸೈಲ್ ಲವ-ಕುಶ ಇದ್ದ ಹಾಗೆ. ನಮ್ಮನ್ನ ಯಾರಿಂದಲ್ಲೂ ಬೇರೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಮಂಕಾಳು ವೈದ್ಯ ನುಡಿದರು. ಆಯುಷ್ಯ ಇಲಾಖೆಯ ಅಧಿಕಾರಿ ಒಬ್ಬರು ಮಾಧ್ಯಮದರ ಮೇಲೆ ದೂರು ದಾಖಲಿಸಿದ ವಿಚಾರವನ್ನು ಪ್ರಸ್ತಾಪಿಸಿ, ತಪ್ಪು ಮಾಡಿದಾಗ ವರದಿ ಮಾಡುತ್ತಲೇ ಇರುತ್ತಾರೆ. ಅದಕ್ಕೆ ದೂರು ದಾಖಲಿಸುತ್ತಾ ಇದ್ದರೆ ಹೇಗೆ ? ನಮ್ಮ ಬಗ್ಗೆಯೂ ಸಹ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗತ್ತಾ ಇರುತ್ತೆ. ಸತೀಶ ಸೈಲ್ ಹಾಗೂ ನಮ್ಮ ಬಗ್ಗೆ ವರದಿಗಳು ಬರತ್ತಲೇ ಇರುತ್ತವೆ. ನಮ್ಮನ್ನ ಬೇರೆ ಮಾಡುವ ಬಗ್ಗೆ ಯಾರು ಎಷ್ಟೇ ಪ್ರಯತ್ನ ಮಾಡಿದ್ದರು,ಅದು ಸಾಧ್ಯವಿಲ್ಲ ಎಂದರು.