ಶಿವಮೊಗ್ಗ: ಮಂತ್ರಿಮಂಡಲ ಮಾಡುವುದು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ. ಖಾತೆ ಹಂಚಿಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಸಿಎಂ ಅವರಿಗಿದೆ. ಆದರೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ಹೈಕಮಾಂಡ್ ಅನುಮತಿ ಇಲ್ಲದೇ ಖಾತೆ ಹಂಚಿಕೆ ಮಾಡಬಾರದು ಎಂದು ಫರ್ಮಾನ್ ಹೊರಡಿಸಿದ್ದಾರೆ. ಈಗಾಗಿ ವಿಳಂಬ ಆಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಮಾತನಾಡಿದ ಅವರು, ಮಂತ್ರಿ ಮಂಡಲ ವಿಸ್ತರಣೆಗೆ ಆರು ತಿಂಗಳು ಆಯ್ತು. ಆರು ತಿಂಗಳಿನಿಂದ ಸರಕಾರ ಇರಲಿಲ್ಲ. ಏನೂ ಕೆಲಸ ಮಾಡುತ್ತಿರಲಿಲ್ಲ. ಮಂತ್ರಿಗಳು ಕಾರು ತೆಗೆದುಕೊಂಡು ತಿರುಗಾಡೋದು ಅಷ್ಟೇ ಕೆಲಸ ಇನ್ನು ಏನೂ ಕೆಲಸ ಇಲ್ಲ ಎಂದು ಟೀಕಿಸಿದರು.
ಮಾಜಿ ಸಿಎಂ ಎಚ್ ಡಿಕ ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತಾರೆ ಎಂಬ ಹೊರಟ್ಟಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಕಿಂಗ್ ಮೇಕರ್ ಆಗುತ್ತಾರೆ ಎನ್ನುವುದು ಭ್ರಮೆ. ಅಂತಹ ಯಾವುದೇ ಪ್ರಯತ್ನ ನಡೆದಿಲ್ಲ ಎದರು.
ಕೇಂದ್ರ ಸರಕಾರದಿಂದ ದುಡ್ಡು ಬಂದಿಲ್ಲ ಅಂದಿರುವುದು ಸುಳ್ಳಾ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಎದೆ ಮುಟ್ಟಿಕೊಂಡು ಹೇಳಲಿ. ಸುಳ್ಳು ಹೇಳೋದು ಬಿಜೆಪಿಯವರ, ಯಡಿಯೂರಪ್ಪನವರ ಜಾಯಮಾನ ನಮ್ಮದಲ್ಲ. ಈ ಸರಕಾರದಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದರು.
ಯದುವೀರ್ ರಾಜಕಾರಣಕ್ಕೆ ಬರುವ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬರಲಿ. ರಾಜಕಾರಣಕ್ಕೆ ಬರೋದು ಬೇಡ ಅನ್ನುವುದಕ್ಕೆ ನಾವ್ಯಾರು. ರಾಜಕೀಯ ಎನ್ನುವುದು ಸಾರ್ವಜನಿಕ ಕ್ಷೇತ್ರ, ಸೇವೆ ಮಾಡುತ್ತೀವಿ ಎನ್ನುವವರು ಯಾರು ಬೇಕಾದರೂ ರಾಜಕೀಯಕ್ಕೆ ಬರಬಹುದು ಎಂದರು.
ಸಿದ್ದರಾಮಯ್ಯ ಸರಕಾರದಲ್ಲಿ ಭಾಗ್ಯಗಳ ಹೆಸರಲ್ಲಿ ಜನರಿಗೆ ಟೋಪಿ ಎಂಬ ಗೃಹ ಸಚಿವ ಬೊಮ್ಮಾಯಿ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಅಕ್ಕಿ ಕೊಡುತ್ತಿರೋದು ಟೋಪಿನಾ, ಮಕ್ಕಳಿಗೆ ಹಾಲು ಕೊಡುತ್ತಿರದು ಟೋಪಿನಾ? ಇಂದಿರಾ ಕ್ಯಾಂಟೀನ್ ಮಾಡಿದ್ದು ಟೋಪಿನಾ, ವಿದ್ಯಾಸಿರಿ ಯೋಜನೆ ಟೋಪಿನಾ? ಬಸವರಾಜ್ ಬೊಮ್ಮಾಯಿ ಸಚಿವರಾದವರೂ ಜವಾಬ್ದಾರಿಯಿಂದ ಮಾತನಾಡಬೇಕು ಎಂದರು.