Advertisement
ಬಿಜೆಪಿ ತನ್ನ ವಿರೋಧ ಪಕ್ಷವಾಗಿರುವ ಕಾಂಗ್ರೆಸನ್ನು ಬಗ್ಗು ಬಡಿದಿರುವುದೇನೋ ನಿಜ. ಆದರೆ ಅದು ಕಾಂಗ್ರೆಸ್‌ನ ಪಾಲಿಗಷ್ಟೇ ಸೀಮಿತವಾಗಿದ್ದ ಹೈಕಮಾಂಡ್ ಸಂಸ್ಕೃತಿ ತನ್ನ ಕೋಟೆಯೊಳಗೂ ಹಬ್ಬುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಹೈಕಮಾಂಡ್ ಸಂಸ್ಕೃತಿಯೆನ್ನುವುದು ಕಳೆದ ಇಷ್ಟು$ದಶಕಗಳಲ್ಲಿ ಕಾಂಗ್ರೆಸ್‌ನ ವಲಯಗಳಿಗಷ್ಟೆ ಸೀಮಿತವಾಗಿತ್ತು. ಇಂದು ಬಿಜೆಪಿ ವಲಯದಲ್ಲೂ ಹೈಕಮಾಂಡ್ ಕಾರುಬಾರು ಭಾರೀ ಗದ್ದಲ ಉಂಟು ಮಾಡುತ್ತಿದೆ. ಬಿಜೆಪಿ ಹೈಕಮಾಂಡ್, ಆರೆಸ್ಸೆಸ್‌ನ ಕೇಂದ್ರ ಕಚೇರಿಯಿರುವ ನಾಗ್ಪುರದಲ್ಲಷ್ಟೇ ಇದೆ ಎಂದು ಕೆಲವರು ನಂಬಿದ್ದಾರೆ; ಆದರೆ ಸಂಘ ಪರಿವಾರದ ಬಗ್ಗೆ ಅರಿವಿರುವವರ ಪ್ರಕಾರ, ಆರೆಸ್ಸೆಸ್ ಬಿಜೆಪಿಗೆ ಕೇವಲ ಸಲಹೆಗಳನ್ನಷ್ಟೇ ನೀಡುತ್ತಿದೆ; ಬಿಜೆಪಿ ಈ ಸಲಹೆಗಳನ್ನು ಒಪ್ಪಬಹುದು ಅಥವಾ ಬಿಡಬಹುದು. ಅದು ಬೇರೆ ಮಾತು. ಬಿಜೆಪಿ ಹೈಕಮಾಂಡ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ಜೆ.ಪಿ. ನಡ್ಡಾ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಿಸಲ್ಪಟ್ಟಿದ್ದಾರೇನೋ ಹೌದು; ಆದರೆ ಅಮಿತ್ ಶಾ ಅವರು ಕೇಂದ್ರ ಮಂತ್ರಿ ಪದ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆ – ಎರಡನ್ನೂ ನಿರ್ವಹಿಸುತ್ತಿದ್ದಾರೆ.
ನಮ್ಮ ರಾಜಕೀಯ ಪಕ್ಷಗಳಲ್ಲಿಂದು ಕೇವಲ “ಹೈಕಮಾಂಡ್ ನಿರ್ದೇಶನದನ್ವಯ ನಡೆಯುವ ಪ್ರಜಾಪ್ರಭುತ್ವ’ವಷ್ಟೇ ಇದೆ. ಹಿಂದೆ ಪಾಕಿಸ್ತಾನದಲ್ಲಿ ಆ ರಾಷ್ಟ್ರದ ಪ್ರಥಮ ಮಿಲಿಟರಿ ಸರ್ವಾಧಿಕಾರಿ ಜ| ಅಯೂಬ್ ಖಾನ್ ತನ್ನ ಬುಡಗಟ್ಟಿ ಮಾಡಿಕೊಂಡ ಬಳಿಕ ಒಲ್ಲದ ಮನಸ್ಸಿನಿಂದ ಕೆಲ ಪ್ರಜಾಸತ್ತಾತ್ಮಕ ಕ್ರಮಗಳನ್ನು ಅಳವಡಿಸಿಕೊಂಡ ಸಂದರ್ಭದಲ್ಲಿ ಹುಟ್ಟಿಕೊಂಡ ಪದಪುಂಜ ಇದು ಎಂಬುದು ನೆನಪಿನಲ್ಲಿರಲಿ. ಇದಕ್ಕೂ ಹಿಂದೆ ಸುಭಾಶ್ಚಂದ್ರ ಬೋಸ್ ಅವರು ಕಾಂಗ್ರೆಸ್ ಹೈಕಮಾಂಡ್ (ಮಹಾತ್ಮಾ ಗಾಂಧಿ) ತನ್ನ ಕಾರ್ಯನಿರ್ವಹಣೆಯಲ್ಲಿ ಮಧ್ಯ ಪ್ರವೇಶಿಸಿದ್ದನ್ನು ಒಪ್ಪದೆ ಕಾಂಗ್ರೆಸ್ ಪಕ್ಷದಿಂದ ಹೊರನಡೆದಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು.
Related Articles
Advertisement
ಹೆಚ್ಚು ಕಡಿಮೆ ನಾಲ್ಕು ವಾರಗಳ ಕಾಲ ಯಡಿಯೂರಪ್ಪ, ಈ ಹಿಂದೆ ರಾಜಪ್ರಭುತ್ವವಿದ್ದ ಮೈಸೂರಿನ ಅನಿಯಂತ್ರಿತ ಅಧಿಕಾರ ಚಲಾಯಿಸುತ್ತಿದ್ದ ದಿವಾನರಂತೆ ಇದ್ದರು. ಆದರೆ ಆ ಕಾಲದ ದಿವಾನರುಗಳು ಕೂಡ “ಮಹಾರಾಜರ ಕೌನ್ಸಿಲ್’ನ ಸದಸ್ಯರ ಸಲಹೆಗನುಗುಣವಾಗಿ ನಡೆದುಕೊಳ್ಳಬೇಕಿತ್ತು. 1941ರಿಂದ ಈ ಮಂಡಳಿಯ ಸದಸ್ಯರುಗಳನ್ನು ಸಚಿವರನ್ನಾಗಿ ನೇಮಿಸ ಲಾಯಿತು. ಸರ್.ಎಂ. ವಿಶ್ವೇಶ್ವರಯ್ಯ ಅವರು ಈ ಕೌನ್ಸಿಲ್‌ನ ಸದಸ್ಯರಲ್ಲೊಬ್ಬರಾದ ಐಸಿಎಸ್ ಅಧಿಕಾರಿ ಸರ್ ಅಲ್ಬಿಯನ್ ಬ್ಯಾನರ್ಜಿ (ಮುಂದೆ ಇವರು 1922ರಿಂದ 26ರ ತನಕ ದಿವಾನರಾದರು) ಹಾಗೂ ಇನ್ನೋರ್ವ ಬ್ರಿಟಿಷ್ ನೇಮಿತ ಹಣಕಾಸು ಕಾರ್ಯದರ್ಶಿ ಜ್ಞಾನ ಶರಣ್ ಚಕ್ರವರ್ತಿ (ಎಫ್ಸಿಎಸ್ ಅಧಿಕಾರಿ) ಇವರುಗಳ ಸವಾಲನ್ನು ಹಾಗೂ ರಸ್ತೆ ತಡೆಗಳಂಥ ಪ್ರಸಂಗಗಳನ್ನು ಎದುರಿಸಬೇಕಾಯಿತು. ಶಾಲೆಗಳ ಮಹಾ ನಿರೀಕ್ಷಣಾಧಿಕಾರಿ (ಇನ್‌ಸ್ಪೆಕ್ಟರ್ ಜನರಲ್ ಆಫ್ ಸ್ಕೂಲ್ಸ್) ಸರ್ ಸಿ.ಆರ್. ರೆಡ್ಡಿ (ಇವರು ಹಿಂದುಳಿದ ವರ್ಗಗಳ ಮೀಸಲಾತಿಯ ಅಗತ್ಯವನ್ನು ಪ್ರತಿಪಾದಿಸುತ್ತಿದ್ದವರು) ಸರ್ ಎಂ.ವಿ. ಅವರ ಇನ್ನೋರ್ವ ಪ್ರಬಲ ವಿರೋಧಿಯಾಗಿದ್ದವರು.
ಬಿಎಸ್‌ವೈ ಅವರ ಮುಖ್ಯಮಂತ್ರಿಗಿರಿಯ ದ್ವಿತೀಯ ಅವಧಿ (2008-11)ಯಲ್ಲಿ ಎದುರಿಸಬೇಕಾಗಿ ಬಂದ ಸಂಕಷ್ಟಗಳಿಗೆ ಕಾರಣ ಅವರ ಕಾರ್ಯನಿರ್ವಹಣೆಯಲ್ಲಿ ದಿಲ್ಲಿ ನಾಯಕರು ಮೂಗು ತೂರಿಸುತ್ತಿದ್ದುದೇ. ಬಳ್ಳಾರಿಯ ರೆಡ್ಡಿ ಸಹೋದರರು ಹಾಗೂ ಈಗ ನೂತನ ಸಂಪುಟದಲ್ಲಿ ಸ್ಥಾನ ಪಡೆದಿರುವ ಶ್ರೀರಾಮುಲು ಇವರುಗಳಿಗೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಕೃಪಾಕಟಾಕ್ಷವಿತ್ತು. ರೆಡ್ಡಿಗಳ ತಂಡ ಸರಕಾರಕ್ಕೆ ಸಾಕಷ್ಟು ಹಾನಿಯುಂಟು ಮಾಡಿದ ಬಳಿಕವಷ್ಟೇ ಆಕೆ ಅವರಿಂದ ದೂರವಾದರು.
ಈ ಬಾರಿ ಬಿಎಸ್‌ವೈ ಅವರು ಹೈಕಮಾಂಡ್‌ನ ಸಲಹೆಯಂತೆಯೇ ನಡೆದುಕೊಂಡಿದ್ದರಾದರೂ, ಸಚಿವ ಪದಾಕಾಂಕ್ಷಿಗಳ ಪೈಕಿ ಕೆಲವರಿಂದಾಗಿ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ಸ್ವಲ್ಪ ಮಟ್ಟಿನ ಅಸಮಾಧಾನದ ಹೊಗೆ ಎದ್ದಿದೆ. ನಿಷ್ಠೆ ಬದಲಿಸಿ ಕೊಂಡಿರುವ ಶಾಸಕರಾದ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಸದಸ್ಯ ಎಚ್. ನಾಗೇಶ್ ಅವರನ್ನು ಸಚಿವರನ್ನಾಗಿ ನೇಮಿಸಿಕೊಂಡ ವಿಷಯದಲ್ಲಿ ಉಂಟಾಗಿರುವ ಅಸಮಾಧಾನ ಇದು.
ಗಮನಿಸಲೇಬೇಕಾದ ಇನ್ನೊಂದು ಸಂಗತಿ ಇದು – ಈಚಿನ ದಿನಗಳಲ್ಲಿ ಸಂಪುಟ ರಚನೆ ಸಂದರ್ಭಗಳಲ್ಲಿ ಬಹುತೇಕ ಶಾಸಕರನ್ನು ನೇರವಾಗಿ ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ನೇಮಿಸಲಾಗುತ್ತಿದೆ. ಇಂಥವರಲ್ಲಿ ಅನೇಕರಿಗೆ ಆಡಳಿತದ ಅನುಭವವಾಗಲಿ, ಜ್ಞಾನವಾಗಲಿ ಇರುವುದೇ ಇಲ್ಲ. ಕರ್ನಾಟಕದಲ್ಲಿ ಕೆಲವೇ ಕೆಲವರನ್ನಷ್ಟೆ ಸಹಾಯಕ ಸಚಿವರನ್ನಾಗಿ ನೇಮಿಸಲಾಗುತ್ತಿದೆ. ಉಪ ಸಚಿವರನ್ನು ನೇಮಕ ಮಾಡುವ ಕ್ರಮ ಬಹುತೇಕ ಮರೆತೇ ಹೋಗಿದೆ. ನಮ್ಮ ಮಂತ್ರಿಗಳಲ್ಲಿ ಹೆಚ್ಚಿನವರಿಗೆ ಕ್ಯಾಬಿನೆಟ್ ದರ್ಜೆಯ ಅರ್ಹತೆ ಇಲ್ಲ. ಇತರರಿಗಿಂತ ಹೆಚ್ಚಿನ ಯೋಗ್ಯತೆ ಹೊಂದಿದವರಾದ ಡಾ| ಬಿ.ಕೆ. ಚಂದ್ರಶೇಖರ್ ಅವರು ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ ಕೇವಲ ಸಹಾಯಕ ಸಚಿವರಷ್ಟೇ ಆಗಿದ್ದರು.
ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಲಕ್ಷ್ಮೀ ಮೆನೋನ್ ಹಾಗೂ ಶ್ಯಾಮನಂದನ್ ಮಿಶ್ರಾರಂಥ ಪ್ರಮುಖ ಸಂಸತ್ಸದಸ್ಯರು ಮೊದಲಿಗೆ ಉಪಸಚಿವರಾಗಿ ಕೆಲಸ ಮಾಡಬೇಕಾಗಿ ಬಂದಿತ್ತು. ಅದೇ ರೀತಿ ಎಂ.ವಿ. ಕೃಷ್ಣಪ್ಪ ಹಾಗೂ ತಮಿಳ್ನಾಡಿನ ನೀಲಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕನ್ನಡಿಗ ಸಂಸದ, ಬ್ಯಾರಿಸ್ಟರ್ ಎಸ್. ಆರ್. ರಾಮಸ್ವಾಮಿಯವರೂ ಉಪಮಂತ್ರಿಗಳಾಗಿದ್ದವರೆ.ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಯಾರಾಗಬಹುದು?ಪಕ್ಷಗಳ ಹೈಕಮಾಂಡ್ ಕುರಿತ ಕಥನದಿಂದ ಕೊಂಚ ಹೊರಳಿ ಪ್ರಧಾನಿ ನರೇಂದ್ರ ಮೋದಿಯವರು ಆ. 15ರಂದು ಮಾಡಿದ ಘೋಷಣೆಯತ್ತ ಗಮನ ಹರಿಸೋಣ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ (ತ್ರಿಸೇನಾ ಸಿಬ್ಬಂದಿ ಮುಖ್ಯಸ್ಥರ) ನೇಮಕ ಕುರಿತ ಘೋಷಣೆ ಇದು. ಇಲ್ಲಿ ನೆನಪಿಸಿಕೊಳ್ಳಬೇಕಾದ ಅಂಶವೆಂದರೆ, 1955ರವರೆಗೂ ನಮಗೆ ಭೂ ಸೇನಾ ಮುಖ್ಯಸ್ಥರು ಹಾಗೂ ನೌಕಾ ಸೇನಾ ಮುಖ್ಯಸ್ಥರು ಮಾತ್ರ ಇದ್ದರು. ಸಂಸತ್ತಿನಲ್ಲಿ ಅಂಗೀಕೃತವಾದ ಶಾಸನವೊಂದರ ಮೂಲಕ ಈ ಹುದ್ದೆಗಳನ್ನು ಭೂ ಸೇನಾ ಸಿಬ್ಬಂದಿ ಮುಖ್ಯಸ್ಥ ಹಾಗೂ ನೌಕಾ ಸೇನೆ ಸಿಬ್ಬಂದಿ ಮುಖ್ಯಸ್ಥ ಹುದ್ದೆ ಎಂದು ಬದಲಾಯಿಸಲಾಯಿತು.
ಆ ಕಾಲದಲ್ಲಿದ್ದ ಭಾರತೀಯ ಭೂ ಸೇನಾ ದಂಡನಾಯಕ ರಾಗಿದ್ದವರು ಕೇವಲ ಇಬ್ಬರಷ್ಟೇ- ಫೀಲ್ಡ್ ಮಾಸ್ಟರ್ ಕೆ.ಎಂ. ಕಾರಿಯಪ್ಪ ಹಾಗೂ ಕೆ.ಎಸ್. ರಾಜೇಂದ್ರ ಸಿಂಗ್‌ಜೀ (ಜೀವಂತ ದಂತ ಕಥೆಯಾಗಿದ್ದ ಕ್ರಿಕೆಟರ್ ರಣಜಿತ್ ಸಿಂಗ್‌ಜೀಯವರ ಸೋದರ ಸಂಬಂಧಿ). ಮೊದಮೊದಲಿಗೆ ಭೂ ಸೇನಾ ಮುಖ್ಯಸ್ಥರಾಗಿದ್ದವರು, ಇಬ್ಬರು ಬ್ರಿಟಿಷ್ ಅಧಿಕಾರಿಗಳು. 1958ರವರೆಗೂ ನಮ್ಮ ನೌಕಾಸೇನೆಯ ನೇತೃತ್ವ ವಹಿಸಿದ್ದವರು ಬ್ರಿಟಿಷ್ ಅಧಿಕಾರಿಗಳೇ. ಇವರಲ್ಲಿ ಕೊನೆಯವರು ಅಡ್ಮಿರಲ್ ಸರ್ ಸ್ಟೀಫನ್ ಕಾರ್ಲಿಲ್. ನೌಕಾಪಡೆಯ ಪ್ರಪ್ರಥಮ ಭಾರತೀಯ ಮುಖ್ಯಸ್ಥರಾಗಿ ನೇಮಕಗೊಂಡವರು ವೈಸ್ ಅಡ್ಮಿರಲ್ ರಾಮದಾಸ್ ಕಟಾರಿ (1958-62). ಇನ್ನು, ಭಾರತೀಯ ವಾಯುಪಡೆಯ ಬಗ್ಗೆ ಹೇಳುವುದಾದರೆ ಅದರ ಮೊದಲ ಮೂವರು ಮುಖ್ಯಸ್ಥ ಬ್ರಿಟಿಷ್ ಅಧಿಕಾರಿಗಳೇ. 1954ರಲ್ಲಿ ಏರ್ ಮಾರ್ಷಲ್ ಸುಬ್ರತೋ ಮುಖರ್ಜಿ ಅವರು ವಾಯುಪಡೆಯ ಮುಖ್ಯಸ್ಥರಾಗಿ ನೇಮಕಗೊಂಡ ಪ್ರಥಮ ಭಾರತೀಯ ಅಧಿಕಾರಿ. ಕಾರಿಯಪ್ಪ ಅವರನ್ನು ಫೀಲ್ಡ್ ಮಾರ್ಷಲ್ ಆಗಿ ನೇಮಕಗೊಳಿಸಿದ್ದು 1986ರಲ್ಲಿ. ಅಂದರೆ, ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ)ದ ವಿಮೋಚನೆಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಜ| ಸ್ಯಾಮ್ ಮಾಣಿಕ್ ಶಾ ಅವರಿಗೆ ಫೀಲ್ಡ್ ಮಾರ್ಷಲ್ ಶ್ರೇಣಿಯನ್ನು ಪ್ರಧಾನ ಮಾಡಿದ 13 ವರ್ಷಗಳ ಬಳಿಕ ಜ | ಕಾರಿಯಪ್ಪನವರಿಗೆ ದೊರೆತ ಗೌರವ ಅದು. ಈಗ ಪ್ರಧಾನಿಯವರ ಘೋಷಣೆಯ ಪ್ರಕಾರ ರಕ್ಷಣಾ ಸಿಬ್ಬಂದಿ ಹುದ್ದೆಗೆ ಯಾರನ್ನು ನೇಮಿಸಲಾಗುತ್ತದೆ (ಭೂ ಸೇನಾ ಮುಖ್ಯಸ್ಥರನ್ನೇ, ವಾಯುಪಡೆಯ ಮುಖ್ಯಸ್ಥರನ್ನೇ ಅಥವಾ ನೌಕಾಸೇನೆಯ ಮುಖ್ಯಸ್ಥರನ್ನೇ) ಎನ್ನುವುದು ಸದ್ಯದ ಕುತೂಹಲ. ತ್ರಿಸೇನಾ ಮುಖ್ಯಸ್ಥರ ಪೈಕಿ ಸೇವಾ ಹಿರಿತನ ಇರುವುದು ಏರ್‌ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರಿಗೆ. ಆದರೆ ಅವರು ಮುಂದಿನ ತಿಂಗಳಲ್ಲಿ ನಿವೃತ್ತರಾಗಲಿದ್ದಾರೆ.