Advertisement

ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್‌ ನಡೆ ನಿರ್ಣಾಯಕ?

11:28 PM Aug 15, 2019 | Team Udayavani |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಗಣನೆ ಶುರುವಾಗಿದ್ದು, ನೂತನ ಸಚಿವರ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್‌ನ‌ ಛಾಯೆ ಎಷ್ಟರ ಮಟ್ಟಿಗೆ ಇರಲಿದೆ ಎಂಬ ಕುತೂಹಲ ಕಮಲ ಪಾಳಯದಲ್ಲಿ ಮೂಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಮಾಣ ವಚನ ಹಾಗೂ ಸ್ಪೀಕರ್‌ ಆಯ್ಕೆ ವೇಳೆ ವರಿಷ್ಠರ ನಡೆಯು ರಾಜ್ಯ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ್ದು, ಮುಂದೆ ಇದೇ ರೀತಿಯ ಅನಿರೀಕ್ಷಿತ ನಡೆ ಮೂಡುವುದೇ ಎಂಬ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆದಿದೆ.

Advertisement

ವರಿಷ್ಠರ ಚಿಂತನೆ, ದೂರದೃಷ್ಟಿ ಯಾವ ಹಾದಿಯಲ್ಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಂಪುಟ ವಿಸ್ತರಣೆಯಲ್ಲಿ ಸಿಗುವ ನಿರೀಕ್ಷೆಯಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 3 ವಾರ ಕಳೆದಿದ್ದು, ಸಂಪುಟ ವಿಸ್ತರಣೆ ಕಸರತ್ತು ಇನ್ನೂ ಮುಂದುವರಿದಿದೆ. ವರಿಷ್ಠರ ಅನುಮತಿ ನಿರೀಕ್ಷೆಯಲ್ಲಿರುವ ಅವರು ಈ ಬಾರಿಯ ಹೈಕಮಾಂಡ್‌ನ‌ ಒಪ್ಪಿಗೆ ಪಡೆದು ಸಂಪುಟ ವಿಸ್ತರಿಸಿಯೇ ತೀರುವ ಹುಮ್ಮಸ್ಸಿನಲ್ಲಿ ದೆಹಲಿ ಪ್ರವಾಸ ಕೈಗೊಂಡಿದ್ದು, ಎಷ್ಟರ ಮಟ್ಟಿಗೆ ಫ‌ಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಅನಿರೀಕ್ಷಿತ ನಡೆ: ಮೈತ್ರಿ ಸರ್ಕಾರ ಪತನವಾದ ಮರುದಿನವೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಲಿಸಲಿದ್ದಾರೆಂಬ ಮಾತು ಆಪ್ತ ವಲಯದಿಂದ ಕೇಳಿಬಂದಿತ್ತು. ಆದರೆ ಹೈಕಮಾಂಡ್‌ನ‌ ಹಸಿರು ನಿಶಾನೆ ಸಿಗದ ಕಾರಣ ಎರಡು ದಿನ ಯಾವ ಪ್ರಕ್ರಿಯೆಯೂ ನಡೆಯಲಿಲ್ಲ. ಮೂರನೇ ದಿನ ಅಂದರೆ ಜು.26ರಂದು ಬೆಳಗ್ಗೆ ರಾಜ್ಯಪಾಲರನ್ನು ಭೇಟಿಯಾಗಿ ಸಮಯ ಕೋರಿ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು.

ಸರ್ಕಾರ ರಚನೆ ಬಳಿಕ ಸ್ಪೀಕರ್‌ ಸ್ಥಾನಕ್ಕೆ ಕೆ.ಜಿ.ಬೋಪಯ್ಯ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿದ್ದರು. ಮರುದಿನ ನಾಮಪತ್ರ ಸಲ್ಲಿಕೆಗೆ ಕೆಲವೇ ಗಂಟೆ ಬಾಕಿಯಿದ್ದಾಗ ಸ್ಪೀಕರ್‌ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ವರಿಷ್ಠರು ಆಯ್ಕೆ ಮಾಡಿ ದ್ದರು. ಹೈಕಮಾಂಡ್‌ನ‌ ಈ ಅನಿರೀಕ್ಷಿತ ನಡೆ ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿ ಮಾತ್ರವಲ್ಲದೆ ಸ್ವಲ್ಪ ಆತಂಕವನ್ನೂ ಮೂಡಿಸಿದಂತಿತ್ತು.

ಬಳಿಕ ಸಂಪುಟ ವಿಸ್ತರಣೆ ಕಸರತ್ತು ನಡೆದಿ ದ್ದರೂ ಈವರೆಗೆ ಕೈಗೂಡಿಲ್ಲ. ಯಡಿಯೂರಪ್ಪ ಒಂದು ಸುತ್ತು ದೆಹಲಿ ಪ್ರವಾಸ ಮುಗಿಸಿದರೂ ಸಂಪುಟ ವಿಸ್ತರಣೆಗೆ ಒಪ್ಪಿಗೆ ಸಿಕ್ಕಿಲ್ಲ. ಇದೀಗ ಎರಡ ನೇ ಬಾರಿಗೆ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು, ತನ್ನದೇ ಆಡಳಿತ ಶೈಲಿ, ವ್ಯವಸ್ಥೆಯನ್ನು ಬಿಜೆಪಿ ಜಾರಿಗೊಳಿಸಿದೆ. ಸುಸ್ಥಿರ ಆಡಳಿತ ನೀಡುವ ಜತೆಗೆ ಪಕ್ಷ ಸಂಘಟನೆಯನ್ನು ಬಲವರ್ಧನೆಗೊಳಿಸಿ ಭವಿಷ್ಯದಲ್ಲೂ ಏಳಿಗೆ ಸಾಧಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವ ವಿಧಾನಕ್ಕೆ ಒತ್ತು ನೀಡಿದೆ.

Advertisement

ಅದೇ ಪ್ರಯೋಗವನ್ನು ಈ ಬಾರಿ ರಾಜ್ಯದಲ್ಲೂ ನಡೆದರೂ ಆಶ್ಚರ್ಯವಿಲ್ಲ. ಇದೇ ವಿಚಾರ ಹಲವರಿಗೆ ಆತಂಕ ಹುಟ್ಟಿಸಿದಂತಿದೆ ಎಂದು ಮೂಲಗಳು ಹೇಳಿವೆ. ಅನಿರೀಕ್ಷಿತ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದ್ದು, ಜನರಿಗೆ ಉತ್ತಮ ಆಡಳಿತ ನೀಡಿ ವಿಶ್ವಾಸ ಗಳಿಸುವುದು ಮುಖ್ಯವೆನಿಸಿದೆ. ಮುಂದೆ ಮಧ್ಯಂತರ ಚುನಾವಣೆ ಎದುರಾದರೂ ಪಕ್ಷ ಸ್ವಂತ ಬಲದ ಸರ್ಕಾರ ರಚಿಸುವಷ್ಟರ ಮಟ್ಟಿಗೆ ರಾಜ್ಯದ ಜನರ ಬೆಂಬಲ ಪಡೆಯುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ ತೋರಿಸಬೇಕಿದೆ. ಇದೇ ಕಾರಣಕ್ಕೆ ಹಳೆಯ ಮಾನದಂಡಗಳಿಗಿಂತ ಪರಿಸ್ಥಿತಿಗೆ ತಕ್ಕಂತೆ ಸಚಿವರ ಆಯ್ಕೆಯಾಗಬೇಕು ಎಂಬುದು ವರಿಷ್ಠರ ಚಿಂತನೆ. ಆ ಕಾರಣಕ್ಕೆ ಸಂಪುಟ ವಿಸ್ತರಣೆ ವಿಳಂಬವಾದಂತಾಗಿದೆ ಎಂದು ತಿಳಿಸಿವೆ.

ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಜತೆಗೆ ಮುಂದೆ ಪಕ್ಷವನ್ನು ಸಂಘಟಿಸಿ ಬೆಳೆಸುವ ನಾಯಕರನ್ನು ರೂಪಿಸುವುದು ವರಿಷ್ಠರ ಚಿಂತನೆಯಂತಿದೆ. ಆ ಕಾರಣಕ್ಕಾಗಿಯೇ ಎಲ್ಲೆಡೆ ಯುವ, ಹೊಸಬರು, ಮಧ್ಯ ವಯಸ್ಸಿನ ಉತ್ಸಾಹಿಗಳನ್ನೇ ಗುರುತಿಸಿ ಅವರಿಗೆ ದೊಡ್ಡ ಜವಾಬ್ದಾರಿ ವಹಿಸಿ ನಿಭಾಯಿಸುವ ಹೊಣೆ ನೀಡುವ ಸಾಧ್ಯತೆಯಿದೆ. ಆ ಕಾರಣಕ್ಕಾಗಿಯೇ ತರಾತುರಿಯಲ್ಲಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡದೆ ಚರ್ಚಿಸಿ ಅಂತಿಮಗೊಳಿಸಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈಗೂ ಇರುಸು-ಮುರುಸು: ಸಂಪುಟ ವಿಸ್ತರಣೆಗೆ ವರಿಷ್ಠರಿಂದ ತ್ವರಿತ ಸ್ಪಂದನೆ ಸಿಗದಿರುವುದು ಯಡಿಯೂರಪ್ಪ ಅವರಿಗೂ ಇರುಸು- ಮುರುಸು ತಂದಂತಿದೆ. “ಸಂಪುಟ ವಿಸ್ತರಿಸಲು ನಾನು ಸಿದ್ಧನಿದ್ದೇನೆ. ಆದರೆ ಹೈಕಮಾಂಡ್‌ ಒಪ್ಪಿಗೆ ನೀಡಬೇಕಲ್ಲ’ ಎಂದು ಯಡಿಯೂರಪ್ಪ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಅದನ್ನು ಸಮರ್ಥಿಸಿಕೊಳ್ಳುವಂತೆ ತಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ವರಿಷ್ಠರೊಂದಿಗೆ ಚರ್ಚಿಸಿಯೇ ತೀರ್ಮಾನಿಸಬೇಕಾಗುತ್ತದೆ ಎಂದಿದ್ದರು. ಹಾಗಾಗಿ ಎಲ್ಲ ಸ್ಥಾನವನ್ನೂ ತಾವು ಸೂಚಿಸಿದವರಿಗೆ ನೀಡಬೇಕೆಂಬ ನಿಲುವಿಗೆ ಬದಲಾಗಿ ತಾವು ಗುರುತಿಸಿ ನಿರ್ದಿಷ್ಟ ಮಂದಿಗೆ ಸಚಿವ ಸ್ಥಾನ ಸಿಕ್ಕರೆ ಸಾಕು ಎಂಬ ಲೆಕ್ಕಾಚಾರದಲ್ಲಿದ್ದಾರೆಂದು ಹೇಳಲಾಗಿದೆ.

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next