Advertisement

High resolution jammer; ಜೈಲುಗಳಲ್ಲಿ ಉನ್ನತ ದರ್ಜೆಯ ಮೊಬೈಲ್‌ ಜಾಮರ್‌: ಸಚಿವ ಪರಮೇಶ್ವರ್‌

12:03 AM Jul 10, 2024 | Team Udayavani |

ಬೆಂಗಳೂರು: ಜೈಲಿನ ಒಳಗೆ ಫೋನ್‌ ತಂದುಕೊಡುತ್ತಾರೆ, ಕೈದಿಗಳು ಹೊರಗಿನವರ ಜತೆ ಸಂಪರ್ಕ ಸಾಧಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಹೈ ರೆಸೊಲ್ಯೂಷನ್‌ ಜಾಮರ್‌ ಅಳವಡಿಸಲಾಗಿದೆ. ಸ್ಥಳೀಯರಿಗೆ ತೊಡಕಾಗಬಾರದೆಂಬ ಉದ್ದೇಶದಿಂದ ಜಾಮರ್‌ ಕಾರ್ಯ ನಿರ್ವಹಣೆಯ ವ್ಯಾಪ್ತಿಯನ್ನು 100 ಮೀಟರ್‌ಗೆ ಇಳಿಸಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ಅವರು ಮಂಗಳವಾರ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಹಲವು ವರ್ಷ ಜೈಲು ವಾಸ ಅನುಭವಿಸಿ ಸನ್ನಡತೆಯ ಆಧಾರದಲ್ಲಿ ಶಿಕ್ಷಾ ಬಂದಿಗಳ ಅವಧಿಪೂರ್ವ ಬಿಡುಗಡೆ ಸಮಾರಂಭದಲ್ಲಿ 77 ಶಿಕ್ಷಾ ಬಂದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ವಿತರಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.

ಹೈ ರೆಸೊಲ್ಯೂಷನ್‌ ಜಾಮರ್‌ ಸುಮಾರು 800 ಮೀಟರ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ವಾಭಾವಿಕವಾಗಿ ಕಾಂಪೌಂಡ್‌ನಿಂದ ಹೊರಗೂ ವ್ಯಾಪಿಸಿರುವುದರಿಂದ ಸ್ಥಳೀಯರಿಗೆ ತೊಂದರೆಯಾಗಿತ್ತು. ಹೀಗಾಗಿ ಜಾಮರ್‌ ಕಾರ್ಯನಿರ್ವಹಣೆ ವ್ಯಾಪ್ತಿಯನ್ನು 100 ಮೀಟರ್‌ಗೆ ಇಳಿಸಲಾಗಿದೆ. ಜಾಮರ್‌ಗಳನ್ನು ತೆಗೆಯುವುದಿಲ್ಲ ಎಂದರು.

ಈ ಹಿಂದೆ ವರ್ಷಕ್ಕೆ 2 ಬಾರಿ ಬಿಡುಗಡೆ ಮಾಡಲಾಗುತ್ತಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ವರ್ಷಕ್ಕೆ 3 ಬಾರಿ ಸನ್ನಡತೆ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದ 54 ಕಾರಾಗೃಹಗಳಲ್ಲಿ 15 ಸಾವಿರಕ್ಕೂ ಹೆಚ್ಚಿನ ಕೈದಿಗಳಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿಡಬೇಕು. ವಿವಿಧ ಕೌಶಲ ತರಬೇತಿ, ಶಿಕ್ಷಣದ ಮೂಲಕ ಅವರನ್ನು ಸುಧಾರಿಸಿ ಪರಿವರ್ತನೆ ತರುವ ಜವಾಬ್ದಾರಿಯು ಇಲಾಖೆಯ ಮೇಲಿದೆ ಎಂದರು.

ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ, ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ್‌, ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಹೆಚ್ಚುವರಿ ಪೊಲೀಸ್‌ ಮಹಾ ನಿರೀಕ್ಷಕ ಆನಂದ್‌ ರೆಡ್ಡಿ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಇದ್ದರು.

Advertisement

ಜೈಲಿನಲ್ಲಿದ್ದು ಬಿಎ ಪದವಿ

15 ವರ್ಷಗಳಿಂದ ಜೈಲು ವಾಸ ಅನುಭವಿಸಿದ್ದೇನೆ. ಆಕಸ್ಮಿಕ ಘಟನೆಯಿಂದ ಜೈಲಿಗೆ ಬರಬೇಕಾಯಿತು. ನನ್ನ ಮಗಳ ಉನ್ನತ ವ್ಯಾಸಂಗದ ಗುರಿ ಸಾಧಿಸಲು ಆಗಲಿಲ್ಲ. ಜೈಲಿನಲ್ಲಿದ್ದುಕೊಂಡು ಬಿ.ಎ. ಪದವಿ ಪೂರ್ಣಗೊಳಿಸಿದ್ದೇನೆ. ಈ ದಿನ ನನಗೆ ಪುನರ್‌ ಜನ್ಮ. ಉತ್ತಮ ನಾಗರಿಕನಾಗಿ ಜೀವನ ಸಾಗಿಸುತ್ತೇನೆ ಎಂದು ಸನ್ನಡತೆ ಮೇಲೆ ಬಿಡುಗಡೆ ಹೊಂದಿದ ದಾನೇಶ್‌ ಭಾವುಕರಾದರು.

ಜೀವನದ ಹೊಸ ಅಧ್ಯಾಯ

ವಿವಿಧ 4 ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಡಿಪ್ಲೊಮಾ ಕೋರ್ಸ್‌ ಗಳನ್ನು ಪೂರ್ಣಗೊಳಿಸಿದ್ದು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಆರಂಭವಾಗಿದೆ. ಆಹಾರ ಮತ್ತು ಸ್ವಾತಂತ್ರದ ಮಹತ್ವ ಏನೆಂಬುದು ಜೈಲು ವಾಸದಲ್ಲಿ ಗೊತ್ತಾಗಿದೆ ಎಂದು ಸತೀಶ್‌ ಆಚಾರ್ಯ ಹೇಳಿದರು.

ಜೈಲಿನಲ್ಲೇ ಕವನ ಸಂಕಲನ ರಚನೆ!

2003ರಲ್ಲಿ ಕಮಿಷನ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಎಂಜಿನಿಯರ್‌ ಒಬ್ಬ ನನ್ನ ತಂದೆಯ ಕೆನ್ನೆಗೆ ಹೊಡೆದಿದ್ದ, ಆ ವೇಳೆಗೆ ಕಾನೂನು ಪದವಿ ಕಲಿಯುತ್ತಿದ್ದ ನನಗೆ ಇದರಿಂದ ತಾಳಲಾರದ ಸಂಕಟವಾಗಿತ್ತು. ಕೋಪದ ಭರದಲ್ಲಿ ಎಂಜಿನಿಯರ್‌ ತಲೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಜೈಲು ಸೇರಿದ್ದೆ. ಪೆರೋಲ್‌ ಮೇಲೆ ಹೊರ ಬಂದ ವೇಳೆ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿ ಗುಂಟೂರಿಗೆ ಪರಾರಿಯಾಗಿದ್ದೆ. ಸಜಾ ಬಂದಿ ಪರಾರಿಯಾದ ಆರೋಪದಲ್ಲಿ ಮತ್ತೂಂದು ಪ್ರಕರಣದಲ್ಲಿ ಜೈಲು ಸೇರಿದ್ದೆ. ಆ ವೇಳೆ ಜೈಲಿನಲ್ಲಿ “ಕೊಲೆಗಾರನ “ಪ್ರೇಮದ ಸಾಲುಗಳು’ ಎಂಬ ಕವನ ಸಂಕಲನ ರಚಿಸಿದ್ದೆ ಎಂದು ಸನ್ನಡತೆ ಆಧಾರದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿದ ಸಿದ್ಧಾರೂಢ ಅನುಭವ ಹಂಚಿಕೊಂಡರು. ಇವರು 21 ವರ್ಷ ಜೈಲಿನಲ್ಲಿದ್ದು ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next