Advertisement

High Blood Pressure: ಅಧಿಕ ರಕ್ತದೊತ್ತಡ (ಹೈ ಬಿಪಿ) ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ!

03:03 PM Dec 31, 2023 | Team Udayavani |

ಸುಮಾರು 45 ವರ್ಷ ಪ್ರಾಯದ ಕಟ್ಟುಮಸ್ತಾದ ಪುರುಷನೊಬ್ಬನನ್ನು ತೀವ್ರ ನಿಗಾ ವಿಭಾಗಕ್ಕೆ ಕರೆದುಕೊಂಡು ಬಂದರು. ಆತನಿಗೆ ಎರಡು ದಿವಸದಿಂದ ಹೃದಯದಲ್ಲಿ ತೀವ್ರತರನಾದ ನೋವು ಕಾಣಿಸಿಕೊಳ್ಳುತ್ತಿದ್ದು, ಅದು ಎದೆಗೂಡಿನ ಹಿಂಭಾಗಕ್ಕೆ ಚಲಿಸಿದಂತಾಗಿ, ದೇಹದಲ್ಲಿ ಏನೋ ಹರಿದು ಹೋದಂತೆ ಹಾಗೂ ಅದು ಹೆಚ್ಚಾಗಿ ತಡೆದುಕೊಳ್ಳಲಾಗದಂತಹ ಅನುಭವವಾಗುತ್ತಿತ್ತು. ಆಸ್ಪತ್ರೆಯಲ್ಲಿ ಆತನ ಪ್ರಾಥಮಿಕ ಪರೀಕ್ಷೆಯಾದ ಇಸಿಜಿಯನ್ನು ಮಾಡಿದರು. ಅದರಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ. ರಕ್ತದೊತ್ತಡ ಪರೀಕ್ಷಿಸಿದಾಗ 250/120 ಎಂಎಂ ಎಚ್‌ಜಿ (ಸಹಜ 120/80 ಎಂಎಂಎಚ್‌ಜಿ) ಇತ್ತು. ಚಿಕಿತ್ಸೆ ನೀಡುವ ತುರ್ತು ಚಿಕಿತ್ಸಾ ವೈದ್ಯರಿಗೆ ಸಂಶಯವಾಗಿ ಹೃದಯದ ಸ್ಕ್ಯಾನಿಂಗ್‌ ಹಾಗೂ ಸಿಟಿ ಸ್ಕ್ಯಾನ್‌ ಮಾಡುತ್ತಾರೆ. ಇದರಲ್ಲಿ ಕಂಡುಬಂದ ಫ‌ಲಿತಾಂಶವೆಂದರೆ ಅಯೋರ್ಟಿಕ್‌ ಡಿಸೆಕ್ಷನ್‌ ಅಥವಾ ಮಹಾ ಅಪಧಮನಿಯ ಒಳಪದರ ಹರಿದು ಹೋಗಿರುತ್ತದೆ.

Advertisement

ಅಯೋರ್ಟಿಕ್‌ ಡಿಸೆಕ್ಷನ್‌ ಅಥವಾ ಮಹಾ ಅಪಧಮನಿಯ ಒಳಪದರ ಹರಿಯುವುದು

ಮಹಾ ಅಪಧಮನಿಯ ರಚನೆಯು ಮೂರು ಪದರಗಳಿಂದ ಆಗಿರುವುದು „ಒಳಗಿನ ಪದರ (Tunica Intima)

„ಮಧ್ಯದ ಪದರ (Tunica Media) ಹಾಗೂ

„ಹೊರಗಿನ ಪದರ (TunicaAdvantitia) ಆಗಿರುತ್ತದೆ.

Advertisement

ಹೃದಯವು ಮಹಾ ಅಪಧಮನಿಗೆ ರಕ್ತ ಪಂಪು ಮಾಡುತ್ತದೆ. ಮಹಾ ಅಪಧಮನಿಯು (Aorta) ಹಲವಾರು ಕವಲುಗಳಿಂದ ದೇಹದ ಎಲ್ಲ ಅಂಗ, ಅಂಗಾಂಶಗಳಿಗೆ ರಕ್ತ ಸರಬರಾಜು ಮಾಡುವುದು. ಈ ಅಪಧಮನಿಯ ಕವಲುಗಳಿಂದಲೇ ನಾವು ವ್ಯಕ್ತಿಯ ರಕ್ತದೊತ್ತಡವನ್ನು ಕಂಡುಹಿಡಿಯುತ್ತೇವೆ. ಸಾಮಾನ್ಯವಾಗಿ ರಕ್ತದೊತ್ತಡವು 120/80 ಎಂಎಂಎಚ್‌ಜಿ ಆಗಿರುತ್ತದೆ. 120 ಎಂಎಂಎಚ್‌ಜಿ ಹೃದಯ ಸಂಕುಚಿತಗೊಂಡಾಗ ಹಾಗೂ 80 ಎಂಎಂಎಚ್‌ಜಿ ಹೃದಯ ವಿಕಸಿತಗೊಂಡಾಗ ನಿರ್ವಾಹಣೆಗೊಂಡ ರಕ್ತದೊತ್ತಡ ಆಗಿರುತ್ತದೆ.

ಅಧಿಕ ರಕ್ತದೊತ್ತಡವು ಹೃದಯ ವೈಫ‌ಲ್ಯ, ಹೃದಯಾಘಾತ, ಪಾರ್ಶ್ವವಾಯು, ಕಣ್ಣು, ಕಿಡ್ನಿ ಮುಂತಾದ ಅಂಗಗಳ ಹಾನಿಗೂ ಕಾರಣವಾಗಬಹುದು.

ರಕ್ತದೊತ್ತಡ ಹೆಚ್ಚಾದಂತೆ ರಕ್ತನಾಳಗಳ (ಮುಖ್ಯ ಹಾಗೂ ಕವಲುಗಳು)ಮೇಲೆ ಒತ್ತಡವು ಹೆಚ್ಚಾಗುವುದು. ಈ ಕಾರಣಕ್ಕಾಗಿ ರಕ್ತದೊತ್ತಡವನ್ನು ನಿಯಮಿತವಾಗಿರಿಸುವುದು ಬಹುಮುಖ್ಯವಾಗಿರುತ್ತದೆ. ಈ ರೀತಿ ಹೆಚ್ಚಾದ ರಕ್ತದೊತ್ತಡವು ವ್ಯಕ್ತಿಯ ಗಮನಕ್ಕೆ ಬಾರದೇ ಅಥವಾ ನಿರ್ಲಕ್ಷತನದಿಂದ ನಿರಂತರವಾಗಿ ಏರಿಕೆ ಕಂಡುಬರುವುದು ಹಾಗೂ ದೀರ್ಘ‌ ಕಾಲದ ಅಧಿಕ ರಕ್ತದೊತ್ತಡದ ದುಷ್ಪರಿಣಾಮವಾಗಿ ಮಹಾ ಅಪಧಮನಿಯ ಒಳಪದರ (Intima)ವು ಹಠತ್ತಾಗಿ ಹರಿದು ಹೋಗಿ ರಕ್ತವು ಒಳ ಮತ್ತು ಮಧ್ಯದ ಪದರದ ನಡುವೆ ಸಂಚರಿಸುವುದು ಇದನ್ನು “”Aortic Dissection” ಎಂದು ಕರೆಯುತ್ತೇವೆ. ಇದರಲ್ಲಿ ಮೂರು ವಿಧಗಳಿವೆ. (Debakey Classification)

ವಿಧ 1- ಮಹಾ ಅಪಧಮನಿಯ ಬುಡದಿಂದ ಕಾಲುಗಳವರಿಗೆ ಇಡಿಯ ಒಳಪದರ ಹರಿದು ಹೋಗುವುದು.

ವಿಧ 2- ಮಹಾ ಅಪಧಮನಿಯ ಬುಡದಿಂದ ಕುತ್ತಿಗೆಯವರೆಗಿನ ಒಳಪದರ ಹರಿದು ಹೋಗುವುದು.

ವಿಧ 3- ಮಹಾ ಅಪಧಮನಿಯ ಕುತ್ತಿಗೆಯ ಭಾಗದಿಂದ ಕಾಲಿನವರೆಗೆ ಒಳಪದರ ಹರಿಯುವುದು.

ರೋಗಲಕ್ಷಣಗಳು

„ಸಾಧಾರಣವಾಗಿ ಒಮ್ಮೆಗೆ ಅತೀ ತೀವ್ರವಾದಂತಹ ಎದೆ ಬಡಿತ ಕಂಡು ಬರುವುದು.

„ಚುಚ್ಚಿದ, ಹರಿದುಹೋದಂತಹ, ಕತ್ತರಿಸಿದಂತಹ ಅನುಭವ ಕಂಡು ಬರುವುದು.

„ಸಾಧಾರಣವಾಗಿ ತೀವ್ರ ಹೃದಯಾಘಾತಕ್ಕೆ ಹೋಲಿಸಿದಲ್ಲಿ ಈ ನೋವು ಚಾಕುವಿನಿಂದ ಚುಚ್ಚಿದ ಹಾಗೆ ಅಥವಾ ದೇಹದ ಹಿಂಬದಿಗೆ ಸುತ್ತಿಗೆಯಿಂದ ಬಡಿದ ಹಾಗೆ ಅನುಭವವಾಗುವುದು.

„ಕೆಲವೊಮ್ಮೆ ತೀವ್ರತರದಿಂದ ಉಸಿರಾಟದ ತೊಂದರೆಯಿಂದಲೂ ರೋಗಿಗಳು ತೀವ್ರ ನಿಗಾ ವಿಭಾಗಕ್ಕೆ ಬರುವುದಿದೆ.

ರೋಗ ನಿರ್ಣಯ

ಈ ರೋಗದ ಲಕ್ಷಣಗಳು ಇದ್ದಲ್ಲಿ ನಿಮ್ಮ ಆರಂಭಿಕ ವೈದ್ಯಕೀಯ ಪರೀಕ್ಷೆಯಿಂದ ಕಂಡುಹಿಡಿಯಲಾಗುತ್ತದೆ ಮತ್ತು ನಿಖರವಾದ ಪತ್ತೆ ಹಚ್ಚುವಿಕೆಯು ಹೃದಯದ ಸ್ಕ್ಯಾನಿಂಗ್‌ (Echo) ಮತ್ತು ಸಿಟಿ ಸ್ಕ್ಯಾನಿಂಗ್‌ನಿಂದ ಸಾಧ್ಯವಾಗುವುದು.

ಚಿಕಿತ್ಸೆ

ಈ ರೋಗದ ಚಿಕಿತ್ಸೆಯು ಸ್ವಲ್ಪ ಸಂಕೀರ್ಣವಾಗಿದ್ದು ಮಹಾ ಅಪಧಮನಿಯ ಯಾವೆಲ್ಲ ಭಾಗಗಳು ಸೇರಿಕೊಂಡಿವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆರಂಭದಲ್ಲಿ ರಕ್ತದೊತ್ತಡ ಸ್ಥಿರಗೊಳಿಸಲು ಬೇಕಾದ ಮದ್ದನ್ನು ಕೊಡಲಾಗುತ್ತದೆ ಹಾಗೂ ರೋಗಿಯ ಸಂಬಂಧಿಕರೊಂದಿಗೆ ಚರ್ಚಿಸಿ ಯಾವ ತರಹದ ಚಿಕಿತ್ಸೆ ಬೇಕಾಗುವುದು ಎಂಬುದರ ಬಗ್ಗೆ ನಿರ್ಣಯಿಸಲಾಗುವುದು ಒಂದು ವೇಳೆ ಮಹಾ ಅಪಧಮನಿಯ ಎಲ್ಲ ಪದರಗಳು ಹರಿದು ರಕ್ತವು ಹೊರಗಡೆ ಹರಿಯಲು ಆರಂಭಿಸಿದರೆ ಜೀವಾಪಾಯ ಸಾಧ್ಯತೆ ಹೆಚ್ಚಾಗಿರುತ್ತದೆ. ಇಲ್ಲದಿದ್ದಲ್ಲಿ ಎಂಡೊವಾಸ್ಕಾಲಾರ್‌ ಸ್ಟೆಂಟಿಂಗ್‌ ಚಿಕಿತ್ಸೆ ಅಥವಾ ತುರ್ತು ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇರುವುದು.

ರಕ್ತದೊತ್ತಡದ ಬಗ್ಗೆ ಇರುವ ಅಪನಂಬಿಕೆ

ಹೆಚ್ಚಾಗಿ ಜನರು ಬಿ.ಪಿ.ಯ ಮಾತ್ರೆ ತೆಗೆದುಕೊಳ್ಳಲು ಹಿಂಜರಿಯುವುದಿದೆ.

ಒಮ್ಮೆ ಬಿ.ಪಿ.ಯ ಮಾತ್ರೆ ಸೇವನೆ ಆರಂಭ ಮಾಡಿದರೆ ಜೀವನಪೂರ್ತಿ ನಿರಂತರವಾಗಿ ತೆಗೆದುಕೊಳ್ಳಬೇಕಾದೀತು ಎನ್ನುವ ಹೆದರಿಕೆಯಿಂದ ಸಮಸ್ಯೆಯನ್ನು ಆಹ್ವಾನಿಸಿಕೊಳ್ಳುತ್ತಾರೆ. ಅದರೆ ಈ ರೀತಿ ಯಾವಾಗಲು ಮಾಡಕೂಡದು. ನಿಮ್ಮ ವೈದ್ಯರು ನಿಮಗೆ ಬಿ.ಪಿ.ಗೆ ಮಾತ್ರೆ ಆವಶ್ಯಕತೆ ಇದೆ ಎಂದು ತಿಳಿಸಿದರೆ ಖಂಡಿತವಾಗಿಯೂ ತಪ್ಪದೆ ತೆಗೆದುಕೊಳ್ಳತಕ್ಕದ್ದು ಹಾಗೂ ನಿರಂತರವಾಗಿ ಬಿ.ಪಿ. ತಪಾಸಣೆ ಮಾಡಿಕೊಳ್ಳುವುದು ಬಹುಮುಖ್ಯ. ನಮಗೆ ನಿತ್ಯ ಹಸಿವಾದಾಗ ನಾವು ಆಹಾರವನ್ನು ಹೇಗೆ ಸೇವಿಸುತ್ತೇವೆಯೋ ಅದೇ ರೀತಿ ಎಂದು ಪರಿಗಣಿಸಿ ಬಿ.ಪಿ. ಮಾತ್ರೆಯನ್ನು ಕೂಡ ತೆಗೆದುಕೊಳ್ಳುವುದು ಉತ್ತಮ.

ಆರೋಗ್ಯವೇ ಭಾಗ್ಯವೆಂಬಂತೆ ಯಾವುದೇ ಕಾರಣಕ್ಕೂ ನಮ್ಮ ದೇಹದ ರಕ್ಷಣೆ ಹಾಗೂ ಆರೋಗ್ಯವನ್ನು ತಾತ್ಸಾರ ಮಾಡಬಾರದು. ನಮಗೆ ದೇವರು ಕೊಟ್ಟಂತಹ ಶ್ರೇಷ್ಠವಾದ ಅಂಗಗಳ ಸಂರಕ್ಷಣೆಗೆ ನಾವು ಪ್ರಥಮ ಆದ್ಯತೆ ಕೊಡಬೇಕು.

ಈ ರೋಗ ಬಾರದಂತೆ ತಡೆಗಟ್ಟುವಿಕೆ

„ ಈ ರೋಗದ ಸಾಮಾನ್ಯ ಕಾರಣವೇನೆಂದರೆ ದೀರ್ಘ‌ಕಾಲದ ಅನಿಯಂತ್ರಿತ ಅಧಿಕ ರಕ್ತದೊತ್ತಡ. ಈಗಿನ ಈ ಒತ್ತಡದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಬಿ.ಪಿ.ಯ ಮೇಲೆ ನಿಗಾವಹಿಸಿಕೊಳ್ಳತಕ್ಕದ್ದು. ಬಿ.ಪಿ.ಯ ಆರಂಭಿಕ ಲಕ್ಷಣಗಳು ಕಂಡುಬಂದಲ್ಲಿ ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸತಕ್ಕದ್ದು.

„ ಉಪ್ಪಿನಂಶವಿರುವ ಪದಾರ್ಥಗಳನ್ನು ಹಿತಮಿತವಾಗಿ ಬಳಸುವುದು ಹಾಗೂ ದೇಹದ ತೂಕವನ್ನು ಸಮತೋಲನದಲ್ಲಿ ಇರಿಸಿಕೊಳ್ಳುವುದು ನಿಯಮಿತವಾಗಿ ವ್ಯಾಯಾಮ ಮಾಡುವುದು.

„ ದಿನಕ್ಕೆ ಕನಿಷ್ಟ ಅರ್ಧ ಘಂಟೆಯಂತೆ ವಾರಕ್ಕೆ ಕನಿಷ್ಟ ಐದು ದಿನವಾದರೂ ಯಾವುದೇ ರೀತಿಯ ವ್ಯಾಯಾಮದಲ್ಲಿ ಭಾಗಿಯಾಗುವುದು ಉತ್ತಮ.

„ ಕುಟುಂಬದವರೊಂದಿಗೆ, ನೆರೆಕರೆಯವರೊಂದಿಗೆ ನೆಮ್ಮದಿಯಿಂದ ಇರಲು ಪ್ರಯತ್ನಿಸುವುದು.

„ ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವವರಿದ್ದರೆ ಕೆಲಸದ ಮಧ್ಯೆ ಸ್ವಲ್ಪ ಅತ್ತಿಂದಿತ್ತ ನಡೆಯಲು ಪ್ರಯತ್ನಿಸುವುದು.

ಡಾ| ಕೃಷ್ಣಾನಂದ ನಾಯಕ್‌,

ಪ್ರೊಫೆಸರ್‌ ಮತ್ತು ಮುಖ್ಯಸ್ಥರು

ಶ್ರೀದೇವಿ ಸಹ ಪ್ರಾಧ್ಯಾಪಕರು ಹೃದಯ ಮತ್ತು ರಕ್ತ ಪರಿಚಲನ ತಂತ್ರಜ್ಞಾನ ವಿಭಾಗ,

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next