Advertisement

ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ

09:35 AM Jan 23, 2020 | sudhir |

ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ ಬಾಂಬ್‌ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಜ. 14ರಂದು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಇಬ್ಬರು ಶಂಕಿತ ಉಗ್ರರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅವಿಭಜಿತ ದ.ಕ. ಜಿಲ್ಲೆಗೆ ಸಂಬಂಧಿಸಿದಂತೆ ಈ ಎರಡು ಪ್ರಮುಖ ಘಟನೆಗಳಿಂದ ಪೊಲೀಸರು ಅಲರ್ಟ್‌ ಆಗಿದ್ದಾರೆ.

Advertisement

ಇಂದ್ರಾಳಿ ರೈಲು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಶ್ವಾನದಳ, ವಿಧ್ವಂಸಕ ಕೃತ್ಯ ತಡೆ ಪೊಲೀಸರ ತಂಡ ಎಲ್ಲೆಡೆ ತಪಾಸಣೆ ನಡೆಸುತ್ತಿದೆ. ಪ್ರಯಾಣಿಕರ ಬ್ಯಾಗ್‌, ಲಗೇಜು ಬಾಕ್ಸ್‌ ಮತ್ತಿತರ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ.

ರೈಲ್ವೇ ಪೊಲೀಸರ ಸಭೆ
ರೈಲ್ವೇ ಪ್ಲಾಟ್‌ಫಾರಂಗಳಲ್ಲಿ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ನಿಲ್ದಾಣಗಳಲ್ಲಿ ರೈಲ್ವೇ ಪೊಲೀಸರು ಈಗಾಗಲೇ ಮುಂಜಾಗರೂಕತೆ ಸಭೆಗಳನ್ನು ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮ, ಕೈಗೊಳ್ಳಬೇಕಾದ ಭದ್ರತೆಗಳ ಬಗ್ಗೆ ಸೂಚನೆ ನೀಡಲಾಗಿದೆ.

ಧಾರ್ಮಿಕ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ
ಉಡುಪಿಯ ಶ್ರೀಕೃಷ್ಣ ಮಠ ಸಹಿತ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಮುಖ ಕ್ಷೇತ್ರಗಳಿಗೆ ಶ್ವಾನದಳ ಮತ್ತು ಭದ್ರತಾ ತಂಡ ಭೇಟಿನೀಡಿ ಪರಿಶೀಲನೆ ನಡೆಸುತ್ತಿದೆ. ತಪಾಸಣೆ ಜ. 26ರ ಗಣರಾಜ್ಯೋತ್ಸವದವರೆಗೂ ಮುಂದುವರಿಯಲಿದೆ ಎಂದು ಪೊಲೀಸ್‌ ಮೂಲಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಕರಾವಳಿ ಭಾಗದಲ್ಲೂ ಭದ್ರತೆ
ಮಂಗಳೂರು: ಕರಾವಳಿ ಸಮುದ್ರ ತೀರದಲ್ಲಿ ಅವಿಭಜಿತ ದ.ಕ. ಜಿಲ್ಲಾ ಪೊಲೀಸರು ನಿರಂತರ ಗಸ್ತಿನಲ್ಲಿದ್ದಾರೆ. ಕೋಸ್ಟ್‌ಗಾರ್ಡ್‌ ಯಾವುದೇ ಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೂ ಪೊಲೀಸರು ಕಣ್ಣಿರಿಸಿದ್ದಾರೆ.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ, ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ, ಖಾಸಗಿ ಬಸ್‌ ನಿಲ್ದಾಣ, ಸಿಟಿ ಬಸ್‌ ನಿಲ್ದಾಣ, ಮಾಲ್‌ಗ‌ಳು ಸಹಿತ ಜನನಿಬಿಡ ಪ್ರದೇಶಗಳಲ್ಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ಎಂಆರ್‌ಪಿಎಲ್‌, ಎನ್‌ಎಂಪಿಟಿ ಭಾಗದ ಲ್ಲಿಯೂ ವಿಶೇಷ ಭದ್ರತೆ ಕೈಗೊಳ್ಳಲಾಗಿದೆ.

ರೈಲಿನೊಳಗೂ “ಶ್ವಾನ’ ತಪಾಸಣೆ
ರೈಲಿನೊಳಗೆ ಅಪರಿಚಿತ ವ್ಯಕ್ತಿಗಳು ಬ್ಯಾಗ್‌ಗಳನ್ನು ತಂದಿರಿಸುವ ಸಾಧ್ಯತೆ ಇರುವುದರಿಂದ ರೈಲು ಪ್ಲಾಟ್‌ಫಾರಂನೊಳಗೆ ಆಗಮಿ ಸುವ ವೇಳೆ ರೈಲಿನೊಳಗೆ ಹೋಗಿ “ಶ್ವಾನ’ಗಳಿಂದ ತಪಾ ಸಣೆ ಮಾಡಲಾಗುತ್ತಿದೆ. ಪ್ರಯಾಣಿಕರಿರುವ ಸ್ಥಳ, ರೈಲಿನ ಕಂಪಾರ್ಟ್‌ಗಳು, ಲಗೇಜ್‌ಗಳನ್ನು ತಪಾಸಣೆ ಮಾಡಲಾಗುತ್ತಿದೆ. ಶಂಕಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ವಿಚಾರಿಸಲಾಗುತ್ತಿದೆ. ಸ್ಥಳೀಯ ಪೊಲೀಸರು ಸಹಕಾರ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next