Advertisement

ವಿಮಾನ ನಿಲ್ದಾಣ: ಹೈ-ಅಲರ್ಟ್‌ ಅಗತ್ಯ

09:33 AM Jan 23, 2020 | sudhir |

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಾಂಬ್‌ ಪತ್ತೆಯಾಗಿ ದೇಶವ್ಯಾಪಿ ಆತಂಕಕ್ಕೆ ಕಾರಣವಾಗಿತ್ತಾದರೂ ಮಂಗಳವಾರವೂ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಹೈ ಅಲರ್ಟ್‌ ಪರಿಸ್ಥಿತಿ ಇರಲಿಲ್ಲ!

Advertisement

ಬಾಂಬ್‌ ಪತ್ತೆ ಮಾಡುವ ಮೂಲಕ ಭಾರೀ ದುರಂತವೊಂದನ್ನು ಭದ್ರತಾ ದಳ ವಿಫಲಗೊಳಿಸಿತ್ತು. ಇದು ಭದ್ರತಾ ಪಡೆಗಳ ಯಶಸ್ಸಾದರೂ ವಿಮಾನ ನಿಲ್ದಾಣದವರೆಗೆ ಬಾಂಬ್‌ ಕೊಂಡೊಯ್ದದ್ದು ಮೇಲ್ನೋಟಕ್ಕೆ ಭದ್ರತಾ ವೈಫಲ್ಯವಾಗಿ ಕಾಣಿಸುತ್ತಿದೆ. ಘಟನೆಯ ಅನಂತರ ನಿಲ್ದಾಣ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವ ಅನಿವಾರ್ಯತೆ ಇತ್ತಾದರೂ ಮಂಗಳವಾರ ನಿರೀಕ್ಷೆಯಷ್ಟು ಬಿಗಿ ಭದ್ರತೆ ಕಾಣಸಿಗಲಿಲ್ಲ. ಟರ್ಮಿನಲ್‌ ಪ್ರವೇಶದ ಬಳಿಕ ಬಿಗಿ ಭದ್ರತೆ ಅಳವಡಿಸ ಲಾಗಿದ್ದರೂ ವಾಹನ ಪ್ರವೇಶದ ಮಾರ್ಗದಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಿರುವುದು ಕಾಣಿಸಲಿಲ್ಲ.

ತಪಾಸಣಾ ಕೌಂಟರ್‌ ಬಂದ್‌
ಈ ಹಿಂದೆ ನಿಲ್ದಾಣ ಪ್ರವೇಶಕ್ಕೂ ಮೊದಲು “ಎಂಟ್ರಿ ಫೀಸ್‌’ ಕೌಂಟರ್‌ ತೆರೆಯಲಾಗಿತ್ತು. ಇಲ್ಲಿಯೇ ಸಿಐಎಸ್‌ಎಫ್‌ ಸಿಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆದರೆ ಒಂದೂವರೆ ತಿಂಗಳಿನಿಂದ ಹೊರಭಾಗದ ಪಾರ್ಕಿಂಗ್‌ ಶುಲ್ಕ ನೀಡುವ ಮತ್ತು ತಪಾಸಣಾ ಕೌಂಟರ್‌ ಬಂದ್‌ ಆಗಿದೆ. ಬದಲಾಗಿ ವಾಹನಗಳು ನೇರವಾಗಿ ಪಾರ್ಕಿಂಗ್‌ ಏರಿಯಾಕ್ಕೆ ತೆರಳಲು ಅವಕಾಶವಿದೆ.

ಹೀಗಾಗಿಯೇ ಸೋಮವಾರ ಶಂಕಿತ ವ್ಯಕ್ತಿ ವಿಮಾನ ನಿಲ್ದಾಣದ ಟರ್ಮಿನಲ್‌ನ ಮುಂಭಾಗ ದವರೆಗೂ ತಪಾಸಣೆಗೆ ಒಳಗಾಗದೆ ಹೋಗುವುದಕ್ಕೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಂಬ್‌ ಪತ್ತೆಯಾದ ಬಳಿಕ ಈಗ ಸಿಐಎಸ್‌ಎಫ್‌ನ ಮೂವರು ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಕೆಎಸ್‌ಆರ್‌ಪಿಯ ತುಕಡಿಯನ್ನು ನಿಯೋಜಿಸಲಾಗಿದೆ.

Advertisement

ಆಗಮನ ರಸ್ತೆಯಲ್ಲೇ ನಿರ್ಗಮನ!
ಏರ್‌ಪೋರ್ಟ್‌ಗೆ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ರಸ್ತೆಗಳಿವೆ. ಎರಡೂ ರಸ್ತೆಯ ಕೊನೆಯಲ್ಲಿ ವಿಮಾನ ನಿಲ್ದಾಣದ ಪಕ್ಕ ಕೌಂಟರ್‌ ಇರುವಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿತ್ತು. ಆದರೆ ಸದ್ಯ ಈ ಕೌಂಟರ್‌ಗಳು ಕಾರ್ಯ ನಿರ್ವಹಿಸದ್ದರಿಂದ ಈಗ ಆಗಮನ ರಸ್ತೆಯ ಮೂಲಕವೇ ನಿರ್ಗಮನದ ವಾಹನಗಳೂ ತೆರಳುತ್ತಿವೆ.

ಇದರಿಂದಾಗಿ ಇಲ್ಲಿ ಹಲವು ಬಾರಿ ಅಪಘಾತ ಘಟನೆಗಳೂ ಸಂಭವಿಸಿವೆ ಏಕ ಮಾರ್ಗದಲ್ಲಿ ಸಂಚಾರದ ಬಗ್ಗೆ ಮಾರ್ಗಸೂಚಿಯೂ ಇಲ್ಲ ಎನ್ನುತ್ತಾರೆ ಟ್ಯಾಕ್ಸಿ ಚಾಲಕರೊಬ್ಬರು.

ಸಿಸಿಟಿವಿ ಬಳಕೆಯಿಲ್ಲ!
ವಿಮಾನ ನಿಲ್ದಾಣದ ಮುಖ್ಯ ಗೇಟ್‌ ಭಾಗದಲ್ಲಿ ಸಿಸಿಟಿವಿಗಳನ್ನು ಈ ಹಿಂದೆ ಅಳವಡಿಸಲಾಗಿತ್ತು. ಹೀಗಾಗಿ ಪ್ರತೀ ವಾಹನದ ಚಲನವಲನ ಇಲ್ಲಿ ದಾಖಲಾಗುತ್ತಿತ್ತು. ಆದರೆ ಕೆಲವು ತಿಂಗಳಿನಿಂದ ಇಲ್ಲಿನ ಬಹುತೇಕ ಸಿಸಿ ಟಿವಿಗಳು ಕಾರ್ಯನಿರ್ವಹಿಸುತ್ತಿಲ್ಲ. ಎರಡು ಸಿಸಿಟಿವಿ ಅಳವಡಿಕೆ ಮಾಡಿದ್ದರೂ ವಯರ್‌ ಮಾತ್ರ ನೇತಾಡುತ್ತಿದ್ದು, ಸಂಪರ್ಕ ಇಲ್ಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next