ಪಠಾಣ್‌ಕೋಟ್ : ಪಂಜಾಬಿನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಎರಡು ಸಂದೇಹಾಸ್ಪದ ಚೀಲಗಳು ಕಂಡು ಬಂದುದನ್ನು ಅನುಸರಿಸಿ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ವರದಿಗಳು ಇಂದು ಗುರುವಾರ ತಿಳಿಸಿವೆ.
ಎಎನ್‌ಐ ಸುದ್ದಿ ಸಂಸ್ಥೆ ಪ್ರಕಾರ ಪಠಾಣ್‌ಕೋಟ್‌ನ ಮಮೂನ್ ಆರ್ಮಿ ಕಂಟೋನ್‌ಮೆಂಟ್ ಬಳಿ ಎರಡು ಸಂದೇಹಾಸ್ಪದ ಬ್ಯಾಗುಗಳು ಪತ್ತೆಯಾದವು. ಈ ಬ್ಯಾಗುಗಳಲ್ಲಿ ಎರಡು ಮೊಬೈಲ್ ಟವರ್ ಬ್ಯಾಟರಿಗಳು ಕೂಡ ಪತ್ತೆಯಾದವು ಎಂದು ಶೋಧ ನಡೆಸಿದ ಪಂಜಾಬ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಠಾಣ್‌ಕೋಟ್ ಮತ್ತು ಗುರುದಾಸ್‌ಪುರದಲ್ಲಿ ಸಂದೇಹಾಸ್ಪದ ಚಟುವಟಿಕೆಗಳು ಕಂಡು ಬಂದುದನ್ನು ಅನುಸರಿಸಿ ಹೈ ಅಲರ್ಟ್ ಘೋಷಿಸಲಾಗಿದ್ದ ಮರುದಿನವೇ ಈ ಸಂದೇಹಾಸ್ಪದ ಬ್ಯಾಗ್‌ಗಳು ಪತ್ತೆಯಾಗಿವೆ.
ಆರ್ಮಿ ಕಂಟೋನ್‌ಮೆಂಟ್ ಸಮೀಪ ಈ ಬ್ಯಾಗುಗಳನ್ನು ಎಸೆದು ಹೋದವರು ಯಾರು ಎಂಬುದನ್ನು ಪೊಲೀಸರು ಇನ್ನಷ್ಟೇ ಗೊತ್ತು ಮಾಡಿಕೊಳ್ಳಬೇಕಿದೆ. ಪಂಜಾಬ್ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಪಠಾಣ್‌ಕೋಟ್ ಮತ್ತು ಗುರುದಾಸ್‌ಪುರ ಜಿಲ್ಲೆಯಲ್ಲಿ ಈಚೆಗೆ ಎಸ್‌ಯುವಿ ವಾಹನವೊಂದು ಪರಿತ್ಯಕ್ತವಾಗಿದ್ದುದು ಕಂಡು ಬಂದಿತ್ತು. ಅದರೊಳಗಿದ್ದ ಮೂವರು ನಿಗೂಢವಾಗಿ ನಾಪತ್ತೆಯಾದದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಎಸ್‌ಯುವಿ ವಾಹನವನ್ನು ಜಮ್ಮುವಿನ ಸಂಭಾದಿಂದ ಕಳವು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.