ಬೆಂಗಳೂರು: ಭಯೋತ್ಪಾದಕರ ದಾಳಿ ಬಗ್ಗೆ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈ ಅಲರ್ಟ್ ಆಗಿರುವಂತೆ ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳಿಗೆ ಸೂಚನೆ ನೀಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶಿಸಿದ್ದಾರೆ. ವಿಧಾನಸೌಧ, ವಿಕಾಸಸೌಧ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಪ್ರಮುಖ ಮಾಲ್‌ಗಳು, ಶಾಲೆಗಳು, ಕಂಪೆನಿಗಳು, ಪಿಜಿಗಳು, ದೇವಾಲಯಗಳು, ಮಸೀದಿ, ಮಂದಿರಗಳಲ್ಲಿ ಹೆಚ್ಚಿನ ಭದ್ರತೆ ನೀಡುವಂತೆ ಆಯುಕ್ತರು ಆದೇಶ ನೀಡಿದ್ದಾರೆ.
ಮುಂದಿನ ಆದೇಶದವರೆಗೆ ಎಲ್ಲ ಅಧಿಕಾರಿಗಳು ಅಲರ್ಟ್ ಆಗಿ ಕಾರ್ಯನಿರ್ವಹಿಸುತ್ತಿರಬೇಕು. ಅಪರಿಚಿತ ವ್ಯಕ್ತಿಗಳು, ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ನಗರದಲ್ಲಿರುವ ಎಲ್ಲ ಸಿಸಿಟಿವಿಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರಿಸಿ ಪರಿಶೀಲಿಸಬೇಕು. ಎಲ್ಲ ಅಧಿಕಾರಿಗಳು ಗಸ್ತಿನಲ್ಲಿರಬೇಕು. ರಾತ್ರಿ ಗಸ್ತಿನಲ್ಲಿನ ಅಧಿಕಾರಿಗಳು ವಾಹನಗಳ ತಪಾಸಣೆ ಮಾಡಿ ಅನುಮಾನ ಬಂದರೆ ಜಪ್ತಿ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಸೂಚನೆಗಳನ್ನು ನೀಡಿದ್ದಾರೆ.
ಹೆಚ್ಚಿದ ಭದ್ರತೆ!: ಪೊಲೀಸ್ ಆಯುಕ್ತರ ದಿಢೀರ್ ಸೂಚನೆ ಹಿನ್ನೆಲೆಯಲ್ಲಿ ವಿಧಾನಸೌಧ, ವಿಕಾಸಸೌಧ, ಮೆಟ್ರೋ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನಗರ ಪೊಲೀಸರು ಸೇರಿದಂತೆ ಕಮಾಂಡೋ ಪಡೆಗಳು ಗಸ್ತು ತಿರುಗುತ್ತಿವೆ. ನಗರದ ವಿವಿಧ ಭಾಗಗಳಲ್ಲಿ ಮೂವತ್ತಕ್ಕೂ ಹೆಚ್ಚು ಕೆಎಸ್‌ಆರ್‌ಪಿ ತುಕಡಿಗಳು ಭದ್ರತೆಗೆ ನಿಯೋಜನೆಗೊಂಡಿದ್ದು, ಹೆಚ್ಚಿನ ನಿಗಾವಹಿಸಲಾಗಿದೆ.ರೈಲ್ವೇ ನಿಲ್ದಾಣ, ಬಸ್‌ನಿಲ್ದಾಣ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಪರಿಶೀಲನೆ ನಡೆಸಿ ಬಿಡಲಾಗುತ್ತಿದೆ.
ಉಗ್ರ ದಾಳಿ ಬೆದರಿಕೆ: ಭಯೋತ್ಪಾದಕ ದಾಳಿ ನಡೆಸುವ ಬಗ್ಗೆ ಪಾಕಿಸ್ತಾನ ಬೆದರಿಕೆಯೊಡ್ಡುತ್ತಿದೆ. ಇದಕ್ಕೆ ಸಿದ್ಧತೆ ಕೂಡ ನಡೆಸಿದೆ ಎಂಬ ಬೇಹುಗಾರಿಕಾ ಸಂಸ್ಥೆಗಳ ಮಾಹಿತಿ ಆಧರಿಸಿ ಕೇಂದ್ರಗುಪ್ತಚರ ದಳ ರಾಜ್ಯ ಪೊಲೀಸರಿಗೂ ಮಾಹಿತಿ ರವಾನಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಎಲ್ಲ ವಿಚಾರವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಗರದಲ್ಲಿ ಬಂದೋಬಸ್ತ್ ಮಾಡಲಾಗಿದೆ. ಎಲ್ಲ ವಿಭಾಗಗಳು ಕೆಲಸ ಮಾಡಲಿ. ಪೊಲೀಸಿಂಗ್ ಮಾಡಲು ಏನಾದರೂ ಸಂಭವಿಸಲೇ ಬೇಕು ಎಂದೇನಿಲ್ಲವಲ್ಲ.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ