ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್(ಜೆಇಎಂ) ಉಗ್ರಗಾಮಿ ಸಂಘಟನೆ ರಾಜ್ಯದ ಹಲವು ಕಡೆ ದಾಳಿ ನಡೆಸುವ ಸಂಚು ರೂಪಿಸಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆ ಹೈಅಲರ್ಟ್ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಜೀ ನ್ಯೂಸ್ ವರದಿ ಮಾಡಿದೆ.
ಗುಪ್ತಚರ ಇಲಾಖೆಯ ಎಚ್ಚರಿಕೆ ಪ್ರಕಾರ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ರಾಜಸ್ತಾನ್, ದೆಹಲಿ ಮತ್ತು ಆಂಧ್ರಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಿದೆ.
ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್ಐ(ಇಂಟರ್ ಸರ್ವೀಸ್ ಇಂಟೆಲಿಜೆನ್ಸ್), ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ದಾಳಿ ನಡೆಸುವಂತೆ ಸಲಹೆ ನೀಡಿರುವುದಾಗಿ ವರದಿ ವಿವರಿಸಿದೆ.
2019ರಲ್ಲಿ ಪುಲ್ವಾಮಾ ದಾಳಿ ನಡೆಸಿದ ಮಾದರಿಯಲ್ಲಿಯೇ ಸೇನೆ, ಪೊಲೀಸ್ ಹಾಗೂ ಇನ್ನಿತರ ಪ್ರಮುಖ ಗಣ್ಯರನ್ನು ಗುರಿಯಾಗಿರಿಸಿ ದಾಳಿ ನಡೆಸುವ ಸಂಚನ್ನು ಜೈಶ್ ರೂಪಿಸಿದೆ ಎಂದು ವರದಿ ಹೇಳಿದೆ.
ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಆಗಸ್ಟ್ 10ರಿಂದ 20ರವರೆಗೆ ಎಲ್ಲಾ ವಿಸಿಟರ್ಸ್ ಗಳ ಪ್ರವೇಶ ನಿರ್ಬಂಧಿಸಿ, ಕೇವಲ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ವಿಮಾನ ನಿಲ್ದಾಣಗಳ ಒಳಗೆ ಬಿಡುವಂತೆ ನಿರ್ದೇಶನ ನೀಡಿದೆ.