ಕಾರವಾರ: ಜಿಲ್ಲೆಯಲ್ಲೂ ಕೊರೊನಾ ಭೀತಿ ಕಂಡು ಬರುತ್ತಿದ್ದು, ಮುಂಜಾಗೃತ ಕ್ರಮವಾಗಿ ಕಾರವಾರ ಬಂದರು ಸೇರಿದಂತೆ ಜಿಲ್ಲೆಯ ಎಲ್ಲ ಪ್ರವಾಸಿ ಸ್ಥಳಗಳಲ್ಲಿ ಎಲ್ಲ ರೀತಿಯ ಕಟ್ಟೆಚ್ಚರ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ| ಹರೀಶ ಕುಮಾರ ಕೆ. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್‌ನಲ್ಲಿ ಕೊರೊನಾ ಸೊಂಕು ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರು, ವೈದ್ಯಕೀಯ ಕಾಲೇಜು ಮುಖ್ಯಸ್ಥರು, ನೌಕಾನೆಲೆ ಮತ್ತು ಬಂದರು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯ ಸಾಧಿಸಿ ಕೊರೊನಾ ಸೊಂಕು ಜಿಲ್ಲೆಗೆ ಯಾವುದೇ ಮಾರ್ಗದಲ್ಲಿ ಬರದಂತೆ ಸೂಕ್ತ ಕ್ರಮ ಕೈಗೊಂಡು ಕಟ್ಟೆಚ್ಚರ ವಹಿಸಬೇಕೆಂದು ಅವರು ಹೇಳಿದರು. ಕಾರವಾರ ಬಂದರನಲ್ಲಿ ವಿದೇಶಿ ಹಡಗುಗಳು ಆಗಮಿಸುವುದರಿಂದ ಮುಖ್ಯವಾಗಿ ಅಲ್ಲಿ ತೀವ್ರ ನೀಗಾ ಇರಿಸಬೇಕು ಮತ್ತು ಆಗಮಿಸಿದ ಹಡುಗುಗಳಲ್ಲಿ ವೈದ್ಯಕೀಯ ತಪಾಸಣೆ ಮಾಡುವುದು ಕಡ್ಡಾಯವಾಗಿದ್ದು, ಇದರ ಮಾಹಿತಿಯನ್ನು ಪ್ರತಿದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳು ಪಡೆದು ರಾಜ್ಯ ಸರಕಾರಕ್ಕೆ ನೀಡಬೇಕು ಎಂದರು.
ಕದಂಬ ನೌಕಾನೆಲೆ ಅಧಿಕಾರಿ ಮಾತನಾಡಿ, ನೌಕಾನೆಲೆಯಲ್ಲಿ ರೋಗಿಗಳ ಆರೈಕೆಗಾಗಿ ಸಾಕಷ್ಟು ಹಾಸಿಗೆಗಳ ವ್ಯವಸ್ಥೆ ಇರುವುದರಿಂದ, ಜಿಲ್ಲಾಸ್ಪತ್ರೆಗೆ 100 ಹಾಸಿಗೆಗಳನ್ನು ನೀಡಲು ಸಿದ್ಧವಿದೆ. ಅಲ್ಲದೇ ಈಗಾಗಲೇ ಸಾಕಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ವಿದೇಶದಿಂದ ಬರುವ ಹಡುಗುಗಳಲ್ಲಿರುವ ಪ್ರಯಾಣಿಕರು ಮತ್ತು ನಾವಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಮುಂಚಿತವಾಗಯೇ ಎಲ್ಲ ಹಡುಗುಗಳಲ್ಲಿ ವೈದ್ಯಕೀಯ ತಂಡ ಇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಸಿಇಒ ಮಾತನಾಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ಆಗಮಿಸುವುದರಿಂದ ಅಲ್ಲಿ ವೈದ್ಯರು ತಂಡ ರಚಿಸಿಕೊಂಡು ಮನೆ ಮನೆಗೆ ಭೇಟಿ ಮಾಡಿ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಎಸ್ಪಿ ಶಿಪ್ರಕಾಶ ದೇವರಾಜು ಮಾತನಾಡಿ, ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳಬಹುದಾದ ಎಲ್ಲ ಮುಂಜಾಗೃತ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದು, ಗೋವಾ ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರನ್ನು ವೈದ್ಯರ ಸಹಾಯದೊಂದಿಗೆ ತಪಾಸಣೆ ಮಾಡುವ ಮೂಲಕ ಹೆಚ್ಚಿನ ಜಾಗೃತಿ ವಹಿಸಲಾಗುವುದು ಎಂದರು.
ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.