ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನವನ್ನು ಯುವ ಪೀಳಿಗೆಗೆ ತೋರಿಸಿಕೊಡುವ ಪ್ರಯತ್ನ ಇತ್ತೀಚಿಗೆ ವಡ್ಡರ್ಸೆಯಲ್ಲಿ ದೊಂದಿ ಬೆಳಕಿನ ಸಾಂಪ್ರದಾಯಿಕ ಶೈಲಿಯ ಯಕ್ಷಗಾನದ ಮೂಲಕ ನಡೆಯಿತು.
ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇದರ ಯುವ ಪ್ರತಿಭೆಗಳು,ಯುವ ಪ್ರಸಂಗಕರ್ತ ಎಮ್.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ಮಾರ್ಗದರ್ಶನದಲ್ಲಿ “ಹಿಡಿಂಬಾ ವಿವಾಹ’ ಎನ್ನುವ ಆಖ್ಯಾನವನ್ನು ಪ್ರದರ್ಶಿಸಿದರು. ಕೋಟ ರಾಮಚಂದ್ರ ಆಚಾರ್ಯರ ಕಲಾಚತುರತೆಯಿಂದ ಮೂಡಿಬಂದ ಬಿದಿರಿನ ರಂಗಸ್ಥಳ, ತೆಂಗಿನ ಗರಿಯ ತಟ್ಟಿ, ಸುತ್ತಲೂ ಮಾವಿನ ತೋರಣ, ಸಿಂಗಾರದ ಹೂವಿನ ಅಲಂಕಾರ, ಹಿಮ್ಮೇಳದವರು ಕೂರಲು ಹಡಿಮಂಚದ ವ್ಯವಸ್ಥೆ, ಸಿಂಹಾಸನದ ಬದಲು ನಾಲ್ಕು ಚಕ್ರದ ಮರದ ಕಟ್ಟು ರಥ, ರಂಗಸ್ಥಳದ ಪಕ್ಕದಲ್ಲೇ ಭವ್ಯವಾದ ಅರಗಿನ ಅರಮನೆ, ದಾರಿಯುದ್ದಕ್ಕೂ ಅಳವಡಿಸಿದ ದೊಂದಿ ಬೆಳಕು ಎಲ್ಲವೂ ಹೊಸ ಲೋಕಕ್ಕೆ ಕರೆದೊಯ್ಯಿತು.
ಅರಮನೆಯು ಉರಿದು ಭಸ್ಮವಾಗುವ ಸಂದರ್ಭ ಪಾಂಡವರನ್ನು ಕಾಪಾಡುವ ಭೀಮನ ವೀರಾವೇಷ ದೊಂದಿಯ ಮಂದಬೆಳಕಿನಲ್ಲಿ ಚೆನ್ನಾಗಿ ಮೂಡಿಬಂತು. ಒಡ್ಡೋಲಗದಿಂದ ಹಿಡಿದು ಅಂತ್ಯದ ತನಕ ಎಲ್ಲಾ ಕಲಾವಿದರ ಪ್ರದರ್ಶನ ಉತ್ತಮವಾಗಿತ್ತು. ಸಾಂಪ್ರದಾಯಿಕ ಪ್ರಯಾಣ ಕುಣಿತ, ವೇಷಭೂಷಣಗಳು, ಚುಟ್ಟಿ ಇಟ್ಟು ಮಾಡಿದ ಬಣ್ಣದ ವೇಷ, ಬಣ್ಣದ ವೇಷದ ಒಡ್ಡೋಲಗ, ಹಿಡಿಂಬಾಸುರನ ಅಭ್ಯಂಜನ, ಅಲಂಕಾರ ಮಾಡಿಕೊಳ್ಳುವ ಸನ್ನಿವೇಷ ಕಣ್ಣಿಗೆ ಕಟ್ಟುವಂತಿತ್ತು. ಹಿಡಿಂಬೆಯ ಪ್ರವೇಶ ಕೂಡ ಚೆನ್ನಾಗಿ ಮೂಡಿಬಂತು.
ಭಾಗವತ ಪ್ರಸಾದ ಕುಮಾರ್ ಮೊಗೆಬೆಟ್ಟು ಅವರ ಗಾನ ರಸಧಾರೆ, ದೇವದಾಸ್ ರಾವ್ ಕೂಡ್ಲಿಯವರ ಮದ್ದಲೆಯ ನುಡಿಕೆ, ಶಿರಿಯಾರ ಕೃಷ್ಣಾನಂದ ಶೆಣೈಯವರ ಚಂಡೆಯ ಕೈ ಚಳಕ ಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಿತು.
ಸತೀಶ್ ಪೂಜಾರಿ ವಡ್ಡರ್ಸೆ