Advertisement
ಹಬ್ಬವೆಂದರೆ ಸಂಭ್ರಮ. ಬದುಕನ್ನು ಸಂಭ್ರಮಿಸಲೆಂದೇ ಮನುಷ್ಯ ಹಬ್ಬಗಳನ್ನು ಹುಟ್ಟು ಹಾಕಿರಬೇಕು. ಹಬ್ಬಗಳಿಲ್ಲದಿದ್ದರೆ ಬದುಕು ನೀರಸ. ಭಾರತೀಯರು ಬದುಕನ್ನು ಸಂಭ್ರಮಿಸಿದಷ್ಟು ಬೇರೆ ದೇಶದವರು ಸಂಭ್ರಮಿಸುವುದಿಲ್ಲ. ಹಾಗಾಗಿಯೇ ತಿಂಗಳಿಗೆ ಒಂದಾದರೂ ಹಬ್ಬಗಳಿರುತ್ತವೆ ನಮಗೆ.
Related Articles
Advertisement
ಮನೆಯಲ್ಲಿ ಆಚರಣೆ ಇಲ್ಲವೆಂದಲ್ಲ; ಡಬ್ಬಿಗಟ್ಟಲೆ ಕಜ್ಜಾಯ ಮಾಡುತ್ತಿದ್ದರು. ಕೈಗೆ ಕೆಂಪು, ಹಸಿರಿನ ಗಾಜಿನ ಬಳೆ, ಕಾಲಿಗೆ ಗೆಜ್ಜೆ, ಹೊಸ ಬಟ್ಟೆ, ರಿಬ್ಬನ್ ಸಿಗುತ್ತಿತ್ತು. ವಿಜಯದಶಮಿಯ ದಿನ ದೇವಿಯೊಂದಿಗೆ ವೇಷಗಳೂ ಮೆರವಣಿಗೆ ಹೊರಟಾಗ ಅದನ್ನು ನೋಡಲು ನಮ್ಮ ಮೆರವಣಿಗೆಯೂ ಹೊರಡುತ್ತಿತ್ತು.
ಬೆಳೆದಿದ್ದು ಕರಾವಳಿಯಲ್ಲಾದರೆ ಮದುವೆಯಾಗಿ ಹೋದದ್ದು ಗಲ್ಫ್ ದೇಶಕ್ಕೆ. ಮರಳುಗಾಡಿನ ದೇಶದಲ್ಲಿ ಹೂವು, ಗಿಡ, ಎಲೆಗಳಿಗೆ ಬರಗಾಲ. ಸಾರ್ವಜನಿಕವಾಗಿ ಹಬ್ಬ ಆಚರಿಸುವಂತಿರಲಿಲ್ಲ. ಹಬ್ಬ ರಜಾದಿನವಾದ ಶುಕ್ರವಾರ ಬಂದರೆ ಸರಿ; ಇಲ್ಲದಿದ್ದರೆ ಹಬ್ಬವೇ ಮುಂದಿನ ಶುಕ್ರವಾರಕ್ಕೆ ಮುಂದೂಡಲ್ಪಡುತ್ತಿತ್ತು. ಶಾರದಾ ಪೂಜೆ, ಆಯುಧ ಪೂಜೆ, ವಿಜಯದಶಮಿ ಎಲ್ಲಾ ಒಂದೇ ದಿನ. ಕನ್ನಡ ಸಂಘ, ತುಳು ಸಂಘ, ಗುಜರಾತಿ ಸಂಘಗಳು ಹಬ್ಬಗಳನ್ನು ಆಚರಿಸುತ್ತಿದ್ದವು. ಕನ್ನಡ ಸಂಘ ಹಾಡುಗಾರರನ್ನು, ಮಿಮಿಕ್ರಿ ಮಾಡುವವರನ್ನು ಕರೆಸಿ ಸಂಭ್ರಮಿಸಿದರೆ; ಗುಜರಾತಿ ಸಂಘದವರು ಒಂಬತ್ತು ದಿನಗಳೂ ಗರ್ಭಾ ನೃತ್ಯ ಆಯೋಜಿಸುತ್ತಿದ್ದರು.
ಈ ನಡುವೆ ಜೀವನದಲ್ಲಿ ಬದಲಾವಣೆಗಳಾಗಿ ಬೆಂಗಳೂರಿನಲ್ಲಿ ಸ್ಥಿರವಾಗಿ ನೆಲೆಸಬೇಕಾಯ್ತು. ಅಷ್ಟರಲ್ಲಿ ಹಬ್ಬಗಳಿಗೂ ಹೊಸ ರಂಗು ಬಂದಿತ್ತು. ಬೆಂಗಳೂರಿನಲ್ಲಿ ಹಬ್ಬಗಳ ಆಡಂಬರ ಸ್ವಲ್ಪ ಜಾಸ್ತಿಯೇ ಅಲ್ಲವೇ? ಬೀದಿ, ಬೀದಿಗಳಲ್ಲಿ ಬಾಳೆಗಿಡ, ಮಾವಿನ ಎಲೆ, ಮಲ್ಲಿಗೆ, ಸೇವಂತಿಗೆಯೆಂದು ಹತ್ತಾರು ಬಗೆಯ ಹೂವುಗಳು, ಸುತ್ತಮುತ್ತಲಲ್ಲಿ ಸಿಗುವ ಹಣ್ಣುಗಳನ್ನು ಬಿಡಿ; ದೂರದ ರಾಜ್ಯಗಳ ಹಣ್ಣುಗಳೂ ಸಿಗುತ್ತವೆ. ವಿವಿಧ ಸೈಜಿನ ತೆಂಗಿನ ಕಾಯಿಗಳ ರಾಶಿ, ತಾಂಬೂಲ, ಬಾಗಿನದ ಸಾಮಗ್ರಿಗಳು… ನವರಾತ್ರಿಯ ಸಡಗರಕ್ಕೆ ಕೊರತೆಯೆಲ್ಲಿ?
ಅಕ್ಕಪಕ್ಕದವರ, ಸ್ನೇಹಿತೆಯರ ಮನೆಗಳಿಂದ ಲಲಿತ ಸಹಸ್ರನಾಮ ಓದಲು, ಅರಿಶಿನ ಕುಂಕುಮಕ್ಕೆ, ಬೊಂಬೆ ನೋಡಲು ಕರೆ ಬರುತ್ತದೆ. ಅಲ್ಲಿಗೆ ಹೋದಾಗ ತೆಂಗಿನ ಕಾಯಿ, ಹಣ್ಣು, ತಾಂಬೂಲವೆಂದು ಬಗಲಲ್ಲಿ ಸಿಕ್ಕಿಸಿಕೊಂಡ ದೊಡ್ಡ ಚೀಲ ತುಂಬುವುದಷ್ಟೇ ಅಲ್ಲ; ಕೋಸುಂಬರಿ, ಪಂಚಕಜ್ಜಾಯ, ಪುಳಿಯೋಗರೆ, ಸಿಹಿತಿಂಡಿ ಅಂತ ಹೊಟ್ಟೆಯಲ್ಲೂ ಜಾಗ ಉಳಿಯುವುದಿಲ್ಲ.
ಫೇಸ್‌ಬುಕ್, ವಾಟ್ಸಾಪ್‌ನ ಈ ಕಾಲದಲ್ಲೂ, ಹಬ್ಬಗಳು ಹಿಂದಿನ ಗೌಜು-ಗದ್ದಲವನ್ನು ಉಳಿಸಿಕೊಂಡಿವೆ. ಹಬ್ಬಗಳ ಆಚರಣೆಯಲ್ಲಿಯೂ ಈ ಸಾಮಾಜಿಕ ಮಾಧ್ಯಮಗಳು ಕೈಯಾಡಿಸುತ್ತಿವೆ. ಹಬ್ಬದ ದಿನ ಇನ್‌ಬಾಕ್ಸ್‌ಗೆ ಬಂದು ಬೀಳುವ ಶುಭಾಶಯಗಳಿಗೆ, ದೇವರ ಫೋಟೊ, ಸಿಹಿತಿಂಡಿಯ ಫೋಟೊಗಳನ್ನು ಲೆಕ್ಕವಿಡಲು ಸಾಧ್ಯವೇ? ದೇವರಿಗೆ ಮಾಡಿದ ಅಲಂಕಾರದ ಫೋಟೊ ತೆಗೆದು ವಾಟ್ಸಾéಪ್‌ನಲ್ಲಿ ಹರಿ ಬಿಡುವ ಪರಿ, ಹಬ್ಬದ ಅಡಿಗೆ ಮಾಡಿ, ಚೆನ್ನಾಗಿ ಜೋಡಿಸಿಟ್ಟು ಫೋಟೋ ತೆಗೆದು ಫೇಸ್ ಬುಕ್‌ನಲ್ಲಿ ಅಪಲೋಡ್ ಮಾಡುವವರ ಗಡಿಬಿಡಿ…ಇವು ಹಬ್ಬದ ರಿವಾಜಿನಲ್ಲಾಗಿರುವ ಈಚಿನ ಬದಲಾವಣೆಗಳು…
ಮೊನ್ನೆ ಗಣೇಶನ ಹಬ್ಬದ ಹಿಂದಿನ ದಿನ ಗೆಳತಿ ಪೂರ್ಣಿಮಾ, ಕಣಗಿಲೆ ಹೂವನ್ನು ಹುಡುಕುತ್ತಿದ್ದಳು. “ಇಷ್ಟೊಂದು ಹೂವಿದೆಯಲ್ಲ; ಕಣಗಿಲೆ ಸಿಗದಿದ್ದರೆ ಬೇಡ ಬಿಡು’ ಎಂದರೆ, “ಹಾಗಲ್ಲ ಕಣೇ, ಮಲ್ಲಿಗೆಯೊಡನೆ ಕಣಗಿಲೆಯ ಹಾರ ಹಾಕಿದರೆ ಫೋಟೊದಲ್ಲಿ ಚೆನ್ನಾಗಿ ಕಾಣುತ್ತದೆ’ ಎಂದಳು. ಅಬ್ಟಾ, ಅನ್ನಿಸಿತು. ಹಬ್ಬದ ಸಂಭ್ರಮಕ್ಕೆ ಸಿಕ್ಕಿರುವ ಹೊಸ ರೂಪ ನೋಡಿ ಖುಷಿಯೂ ಆಯ್ತು.
-ಗೀತಾ ಕುಂದಾಪುರ