Advertisement

ಹೈಟೆಕ್‌ ಬಸ್‌ ಶೆಲ್ಟರ್‌ಗಿಲ್ಲ ಉದ್ಘಾಟನೆ ಭಾಗ್ಯ

05:06 PM Nov 24, 2022 | Team Udayavani |

ಗದಗ: ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸುಸಜ್ಜಿತ ಹೈಟೆಕ್‌ ಬಸ್‌ ಶೆಲ್ಟರ್‌ಗಳು ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ, ಇದುವರೆಗೆ ಉದ್ಘಾಟನೆ ಭಾಗ್ಯವಿಲ್ಲದ ಕಾರಣ ಬಸ್‌ ಶೆಲ್ಟರ್‌ ಇದ್ದೂ ಇಲ್ಲದಂತಾಗಿವೆ.

Advertisement

ಹೌದು, ಅಮೃತ ಯೋಜನೆಯಡಿ ಅವಳಿ ನಗರದಲ್ಲಿ ಕಳೆದ ವರ್ಷ 1 ಕೋಟಿ ವೆಚ್ಚದಲ್ಲಿ 9 ನೂತನ ಹೈಟೆಕ್‌ ಬಸ್‌ ಶೆಲ್ಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಉದ್ಘಾಟನೆ ಹಾಗೂ ಸರಿಯಾಗಿ ನಿರ್ವಹಣೆ ಇರದ ಕಾರಣ ಬಸ್‌ ಶೆಲ್ಟರ್‌ಗಳು ಜಾನುವಾರಗಳ ತಾಣವಾಗಿ ಮಾರ್ಪಟ್ಟಿದ್ದಲ್ಲದೇ, ಕುಡಕರ ವಿಶ್ರಾಂತಿ ಸ್ಥಳವಾಗಿದೆ. ಅಷ್ಟೇ ಅಲ್ಲದೆ, ಗುಟ್ಕಾ, ತಂಬಾಕು ಹಾಕಿಕೊಂಡು ಜನರು ಎಲ್ಲೆಂದರಲ್ಲಿ ಉಗುಳಿದ್ದರಿಂದ ಶೆಲ್ಟರ್‌ ಗಲೀಜಾಗಿದ್ದು, ದುರ್ವಾಸನೆ ಬೀರುತ್ತಿದೆ.

ಅಂದ ಕಳೆದುಕೊಂಡ ಬಸ್‌ ಶೆಲ್ಟರ್‌: ನಗರದಲ್ಲಿ ನಿರ್ಮಾಣ ವಾದ ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಸಂಪೂರ್ಣ ಆಧುನಿಕ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ಫೋಟೋ ಹಾಕಲಾಗಿದೆ. ಮೊದಲ ಫೋಟೋ ದಲ್ಲಿ ಕವಿಯ ಪರಿಚಯ, ಅವರ ಜನನ, ಕಾವ್ಯನಾಮ ಸೇರಿದಂತೆ ಹಲವಾರು ಮಾಹಿತಿ, ಎರಡನೇ ಫೋಟೋ ದಲ್ಲಿ ಸ್ವತ್ಛತೆ ಕುರಿತು ಮಾಹಿತಿ ನೀಡಲಾಗಿದೆ. ಮೂರನೇ ಫೋಟೋದಲ್ಲಿ ಗದಗ ಜಿಲ್ಲೆಗೆ ಸಂಬಂಧಿ ಸಿದ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಮಾಹಿತಿ ಪಡೆಯಲು ಉಪಯುಕ್ತವಾಗಿದೆ. ಇಂತಹ ಬಸ್‌ ನಿಲ್ದಾಣದಲ್ಲಿರುವ ಚಿತ್ರಗಳು ಹಾಗೂ ಮಾಹಿತಿ ಅಳಿಸಿ ಹೋಗಿದ್ದು, ಉದ್ಘಾಟನೆಗೂ ಮುನ್ನವೇ ತನ್ನ ಅಂದವನ್ನು ಕಳೆದುಕೊಂಡಿದೆ.

9 ಹೈಟೆಕ್‌ ಬಸ್‌ ಶೆಲ್ಟರ್‌: ಗದಗ-ಬೆಟಗೇರಿ ಅವಳಿ ನಗರದ ಗಂಗಿಮಡಿ, ಎಸ್‌.ಎಂ. ಕೃಷ್ಣ ನಗರ, ಹಾಕಿ ಗ್ರೌಂಡ್‌, ಮಹಾತ್ಮ ಗಾಂಧಿ  ಸರ್ಕಲ್‌, ಬನ್ನಿಕಟ್ಟಿ, ಜಿಲ್ಲಾಡಳಿತ ಭವನ, ಮುಳಗುಂದ ನಾಕಾದ ಒಳಚರಂಡಿ ಮಂಡಳಿ ಹತ್ತಿರ, ಜಿಲ್ಲಾ ಆಸ್ಪತ್ರೆ, ಕುಷ್ಟಗಿ ಚಾಳ ಸೇರಿದಂತೆ ಒಟ್ಟು 9 ಬಸ್‌ ಶೆಲ್ಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಸಂಪೂರ್ಣ ಕೆಲಸ ಮುಗಿದು ಒಂದು ವರ್ಷ ಕಳೆದರೂ ಸಾರ್ವಜನಿಕ ಅನೂಕುಲಕ್ಕೆ ಬಾರದಂತಾಗಿದೆ.

Advertisement

ಕೋಟಿ ರೂ. ವೆಚ್ಚ: ಅಮೃತ ಯೋಜನೆಯಡಿ ಅವಳಿ ನಗರದಲ್ಲಿ ಒಂದು ಬಸ್‌ ಶೆಲ್ಟರ್‌ಗೆ 12 ಲಕ್ಷ ರೂ.ನಂತೆ ಒಟ್ಟು 9 ಸಿಟಿ ಬಸ್‌ ನಿಲ್ದಾಣಕ್ಕೆ 1 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ವರ್ಷ ಅವಳಿ ನಗರದಲ್ಲಿ ಸಿಟಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ಪಾಳುಬಿದ್ದ ಶೆಲ್ಟರ್‌ಗಳಾಗಿವೆ.

ರಸ್ತೆ ಬದಿಯೇ ಬಸ್‌ ನಿಲ್ದಾಣ: ಸಾರ್ವಜನಿಕರ ಅನೂಕುಲಕ್ಕಾಗಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡಿದರು ಸಹ ಜಿಲ್ಲೆಯ ಜನರು ಕೇಂದ್ರ ಬಸ್‌ ನಿಲ್ದಾಣ ಬಿಟ್ಟರೆ ಉಳಿದ ಕಡೆ ರಸ್ತೆ ಬದಿಯೇ ಬಸ್‌ ಇಳಿಯಬೇಕು. ಜನತೆಗೆ ಬೀದಿ ಪಕ್ಕದ ಜಾಗವೇ ನಗರ ಸಾರಿಗೆ ಬಸ್‌ ನಿಲ್ದಾಣ ಆಗಿ ಬಿಟ್ಟಿದೆ. ಸುಸಜ್ಜಿತ ನಗರ ಸಾರಿಗೆ ಬಸ್‌ ನಿಲ್ದಾಣ ಉದ್ಘಾಟನೆ ಮಾಡುವ ಮೂಲಕ ಜನತೆ ಮಳೆ, ಬಿಸಿಲಿನಿಂದ ರಕ್ಷಣೆ ಪಡೆಯಲು ಹೆಚ್ಚು ಅನುಕೂಲ ಕಲ್ಪಿಸಲಾಗಿದೆ.

ಗದಗ-ಬೆಟಗೇರಿ ವ್ಯಾಪ್ತಿಯಲ್ಲಿರುವ ಬಸ್‌ ಶೆಲ್ಟರ್‌ಗಳು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿರುವ ಮಾಹಿತಿ ತಿಳಿದಿದ್ದು, ಕೂಡಲೇ ಬಸ್‌ ಶೆಲ್ಟರ್‌ಗಳಿಗೆ ಕಾಯಕಲ್ಪ ಕಲ್ಪಿಸಿ ಸಾರ್ವಜನಕರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು. ಉಷಾ ದಾಸರ, ಅಧ್ಯಕ್ಷರು, ನಗರಸಭೆ

ಗದಗ-ಬೆಟಗೇರಿ ಭಾಗದಲ್ಲಿ ನಿರ್ಮಾಣ ಮಾಡಿರುವ ಬಸ್‌ ಶೆಲ್ಟರ್‌ಗಳನ್ನು ಕೂಡಲೇ ಉದ್ಘಾಟನೆ ಮಾಡಬೇಕು. ಸಾರ್ವಜನಿಕರಿಗೆ ಅನೂಕುಲ ಕಲ್ಪಿಸಬೇಕು. ಅವುಗಳ ನಿರ್ವಹಣೆಯನ್ನು ನಗರಸಭೆಯಿಂದ ಮಾಡಬೇಕು. ಬಸ್‌ ಶೆಲ್ಟರ್‌ಗಳು ಅವಳಿ ನಗರ ಹಾಗೂ ಗ್ರಾಮೀಣ ಭಾಗದ ಜನತೆಗೆ ಬಹಳ ಅನುಕೂಲವಾಗಿದೆ.  –ಫಯಾಜ್‌ ಮಕಾಂದಾರ, ಸ್ಥಳೀಯ ನಿವಾಸಿ

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next