Advertisement
ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀ.ಆಗಿದ್ದು, ಬುಧವಾರ ಮುಂಜಾನೆ ನೀರು 8.4 ಮೀ.ಗೆ ತಲುಪಿತ್ತು. ಆದರೆ ಬಳಿಕ ಮಧ್ಯಾಹ್ನ ನೀರಿನ ಮಟ್ಟ ಇಳಿಕೆಯಾಗಿ 8.2 ಮೀ.ಗೆ ತಲುಪಿದ ಹಿನ್ನೆಲೆಯಲ್ಲಿ ಆತಂಕ ಕಡಿಮೆ ಯಾಗಿದ್ದರೂ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆ ಯಾದರೆ ಮತ್ತೆ ಪ್ರವಾಹ ಏರಿಕೆ ಸಾಧ್ಯತೆ ಇದೆ.
ಬಂಟ್ವಾಳ ಪೇಟೆಯ ಬಡ್ಡಕಟ್ಟೆ ಮಾರುಕಟ್ಟೆಗೆ ನೆರೆ ನೀರು ನುಗ್ಗಿ ಮೀನು ಮಾರುಕಟ್ಟೆ, ಪ್ರಯಾಣಿಕರ ತಂಗುದಾಣ ಕೊಂಚ ಹೊತ್ತು ಜಲಾವೃತವಾದವು. ಬಂಟ್ವಾಳ ಪೇಟೆಗೆ ಸಂಪರ್ಕ ಕಲ್ಪಿಸುವ ಜಕ್ರಿಬೆಟ್ಟು ಪ್ರದೇಶದಲ್ಲಿ ರಸ್ತೆಗೆ ನೀರು ಬಂದಿತ್ತು. ಅಜಿಲಮೊಗರು ಮಸೀದಿ ಪರಿಸರದ ಸುತ್ತ ನೆರೆ ನೀರು ನುಗ್ಗಿ ಅಜಿಲಮೊಗರು-ಉಪ್ಪಿನಂಗಡಿ ರಸ್ತೆ ಸಂಪರ್ಕ ಕಡಿತಗೊಂಡಿತು.
Related Articles
Advertisement
ಕಡೇಶಿವಾಲಯ, ಬರಿಮಾರು, ಮಣಿನಾಲ್ಕೂರು, ಸರಪಾಡಿ, ನಾವೂರು, ನರಿಕೊಂಬು, ತುಂಬೆ ಪ್ರದೇಶದಲ್ಲಿ ಅಡಿಕೆ ತೋಟಗಳಿಗೆ ನೆರೆ ನೀರು ನುಗ್ಗಿತು. ನೆರೆಯ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಮುಂಜಾಗ್ರತ ಕ್ರಮಕೈಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ.
ಪುಂಜಾಲಕಟ್ಟೆ: ಸುಂಟರಗಾಳಿಪುಂಜಾಲಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಸುಂಟರಗಾಳಿ ಬೀಸಿ ಹಲವೆಡೆ ಹಾನಿ ಸಂಭವಿಸಿದೆ. ಇರ್ವತ್ತೂರು, ನೇರಳಕಟ್ಟೆ, ಪೆಲತ್ತಕಟ್ಟೆ, ನಯನಾಡು, ಮೂರ್ಜೆ, ಪುಂಜಾಲಕಟ್ಟೆ, ಗಂಪದಡ್ಡ, ಪುರಿಯ ಮೊದಲಾದೆಡೆ ಸುಂಟರಗಾಳಿಗೆ ಅಡಿಕೆ ಮರಗಳ ಸಹಿತ ಮರಗಳು ಧರಾಶಾಯಿಯಾಗಿವೆ. ಇರ್ವತ್ತೂರು, ನೇರಳಕಟ್ಟೆ ಗಳಲ್ಲಿ ಮರಗಳು ರಸ್ತೆಗೆ ಬಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.