ನರೇಗಲ್ಲ: ಬರಗಾಲ ಹಿನ್ನೆಲೆಯಲ್ಲಿ ಸರಕಾರ ಅಲ್ಲಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿದೆ. ಆದರೆ ಅಲ್ಲಿರುವ ಮೇವು ಖರೀದಿಸಲು ರೈತರು ಹಿಂದೇಟು ಹಾಕುತ್ತಿದ್ದು, ಬ್ಯಾಂಕ್‌ನಲ್ಲಿ ಮೇವು ಗೆದ್ದಲು ಹತ್ತುವ ಹಂತ ತಲುಪಿದೆ.
ಜಿಲ್ಲಾಡಳಿತವು ರೋಣ ಹಾಗೂ ಗಜೇಂದ್ರಗಡ ತಾಲೂಕು ವ್ಯಾಪ್ತಿಯ ಹಾಲಕೆರೆ, ರಾಜೂರು, ಬೆಣಚಮಟ್ಟಿ, ಮಾಡಲಗೇರಿ, ಚಿಕ್ಕಮಣ್ಣೂರ ಗ್ರಾಪಂಗಳಲ್ಲಿ ಮೇವು ಸಂಗ್ರಹ ಮಾಡಿ ಗ್ರಾಮಗಳಲ್ಲಿ ಪ್ರಚಾರ ಮಾಡಿದರೂ ಸರ್ಕಾರ ಕೊಡುತ್ತಿರುವ ಮೇವನ್ನು ಕೊಂಡುಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಜೋಳದ ದಂಟು ತಿಂದ ದನಗಳು ಈ ಹೊಟ್ಟು ತಿನ್ನಲು ಹಿಂದೇಟು ಹಾಕುತ್ತಿದೆ. ಹೀಗಾಗಿ ಹಣ ಕೊಟ್ಟು ವೇವು ಖರೀದಿಸಲು ಹಿಂದೆಮುಂದೆ ನೋಡುವಂತಾಗಿದೆ ಎನ್ನುತ್ತಾರೆ ರೈತರು.
ತಾಲೂಕಿನಲ್ಲಿ ಒಟ್ಟು 15 ಟನ್ ಮೇವು ಬಂದಿದೆ. ಚಿಕ್ಕಮಣ್ಣೂರ ಮತ್ತು ಮಾಡಲಗೇರಿ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಅಲ್ಲಿ ಮೇವು ಸಂಗ್ರಹಿಸಿಡಲಾಗಿದೆ. ಈಗಾಗಲೇ 1.50 ಟನ್‌ನಷ್ಟು ಮಾತ್ರ ಖರ್ಚಾಗಿದೆ.
•ಸಿಕಂದರ ಎಂ. ಆರಿ
Advertisement
ಒಂದು ಕೆಜಿ ಒಣ ಮೇವಿಗೆ 2 ರೂ. ನಂತೆ ತೂಕ ಹಾಕಿ ಜಾನುವಾರುಗಳಿಗೆ 15 ದಿನಗಳ ಮಟ್ಟಿಗೆ ನೀಡಲಾಗುತ್ತಿದೆ. ಗ್ರಾಪಂ ಮಟ್ಟದಲ್ಲಿ ಈಗಾಗಲೇ ಶೇಖರಣೆಯಾಗಿ ಸುಮಾರು ತಿಂಗಳುಗಳೇ ಕಳೆದಿವೆ. ಆದರೂ ಜಾನುವಾರುಗಳನ್ನು ಹೊಂದಿರುವ ರೈತರು ವಾರಕ್ಕೆ ಒಬ್ಬರು, ಇಲ್ಲವೇ 15 ದಿನಕ್ಕೆ ಒಬ್ಬರು ಬಂದು ಮೇವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಶೇಖರಣೆಯಾಗಿರುವ ಮೇವು ಗೆದ್ದಲು ಹತ್ತಿ ಉಪಯೋಗಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.