ದೋಟಿಹಾಳ: ಅನೇಕ ಕಡೆಗಳಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲು ಹೋರಾಟ ಮಾಡುತ್ತಾರೆ. ಆದರೆ ಸಮೀಪದ ಹೆಸರೂರು ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಜನ ಉಪಯೋಗ ಮಾಡದಿರುವುದು ವಿಪರ್ಯಾಸ.
ಸರಕಾರ ಜನರ ಆರೋಗ್ಯಕ್ಕಾಗಿ ಶುದ್ಧ ನೀರಿನ ಘಟಕ ಸ್ಥಾಪಿಸುತ್ತದೆ. ಆದರೆ ಹೆಸರೂರು ಗ್ರಾಮಸ್ಥರು ಶುದ್ಧ ನೀರನ್ನು ಬಳಸುತ್ತಿಲ್ಲ. ಆರಂಭದಲ್ಲಿ 10-15 ಕುಟುಂಬಗಳು ಈ ಘಟಕದಿಂದ ನೀರು ಪಡೆಯುತ್ತಿದರು. ನಂತರ ಒಬ್ಬೊಬ್ಬರಾಗಿ ನೀರು ಪಡೆಯುವುದನ್ನೇ ಬಿಟ್ಟಿದ್ದಾರೆ. ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಶುದ್ಧ ನೀರನ್ನು ಬಳಸುವವರು ಬೆರಳೆಣಿಕೆಯಷ್ಟು ಮಾತ್ರ. ಗ್ರಾಮದಲ್ಲಿ ನೀರಿನ ಘಟಕ ಸ್ಥಾಪಿಸಿದ ಗ್ರಾಪಂ ಸದಸ್ಯರೇ ಶುದ್ಧ ನೀರನ್ನು ಕುಡಿಯುತ್ತಿಲ್ಲ. ಹೀಗಿರುವಾಗ ಸಾಮಾನ್ಯ ಜನರು ಉಪಯೋಗಿಸುವುದು ಯಾವಾಗ ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.
ಘಟಕದ ಆದಾಯಕ್ಕಿಂತ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆ. ಜನರಿಗೆ ಬೇಡವಾದ ಶುದ್ಧ ನೀರಿನ ಘಟಕವನ್ನು ಅಧಿಕಾರಿಗಳು ಬೇರೆ ಕಡೆಗೆ ಸ್ಥಳಾಂತರಿಸಬೇಕು. ಅಥವಾ ಘಟಕವನ್ನು ಸ್ಥಗಿತ ಮಾಡಬೇಕು. ಇಲ್ಲದಿದ್ದರೆ ಟ್ಯಾಂಕಿನಲ್ಲಿ ಮತ್ತೂಮ್ಮೆ ಹಲ್ಲಿ ಅಥವಾ ಬೇರೆ ಯಾವುದೇ ಪ್ರಾಣಿ ಬಿದ್ದು ಜನರು ಅದೇ ನೀರನ್ನು ಕುಡಿದು ಅಸ್ವಸ್ಥರಾಗುವ ಸಂಭವವಿದೆ ಎನ್ನುತ್ತಾರೆ ಗ್ರಾಮಸ್ಥರು.
ಹೆಸರೂರು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕದ ಟ್ಯಾಂಕಿನಲ್ಲಿ ಹಲ್ಲಿ ಬಿದ್ದು ವಾರಗಳೇ ಕಳೆದರೂ ಅದನ್ನು ತೆಗೆಯಬೇಕಾದ ಘಟಕದ ಸಿಬ್ಬಂದಿ ಇತ್ತ ಮುಖ ಮಾಡಿಲ್ಲ. ಶುದ್ಧ ಘಟಕದಿಂದ ನೀರು ಪಡೆಯಲು ಆಗಮಿಸುವ ಕೆಲವೇ ಜನರು ಕೂಡ ಟ್ಯಾಂಕಿನಲ್ಲಿ ಹಲ್ಲಿ ಬಿದ್ದಿದ್ದನ್ನು ಕಂಡು ಘಟಕದ ನೀರು ಬಳಸುವುದು ಬಿಟ್ಟಿದ್ದಾರೆ.
ಈ ಕುರಿತು ಮಾತನಾಡಿದ ಘಟಕದ ಸಿಬ್ಬಂದಿ, ಟ್ಯಾಂಕಿನಲ್ಲಿ ಹಲ್ಲಿ ಬಿದ್ದಿದ್ದು ನನಗೆ ಕಂಡಿಲ್ಲ. ಈ ಘಟಕದಿಂದ ಜನರು ನೀರು ಪಡೆಯುವುದೇ ಕಡಿಮೆ. ಹೀಗಾಗಿ ವಾರದಲ್ಲಿ 2-3 ಸಲ ಮಾತ್ರ ಭೇಟಿ ನೀಡುತ್ತೇನೆ. ಉಳಿದ ದಿನಗಳಲ್ಲಿ ಕಚೇರಿಯಲ್ಲಿ ಕೆಲಸಕ್ಕೆ ಹೋಗುತ್ತೇನೆ. ಟ್ಯಾಂಕಿನಲ್ಲಿ ಹಲ್ಲಿ ಬಿದ್ದಿರುವುದು ನನಗೆ ಕಂಡು ಬಂದಿಲ್ಲ. ಸದ್ಯ ಗ್ರಾಮಸ್ಥರಿಂದ ವಿಷಯ ತಿಳಿದ ಮೇಲೆ ಟ್ಯಾಂಕಿನ ನೀರು ಸ್ವಚ್ಛಗೊಳಿಸಿ ಬೇರೆ ನೀರನ್ನು ಸಂಗ್ರಹಿಸಲಾಗಿದೆ ಎಂದರು.
•ಮಲ್ಲಿಕಾರ್ಜುನ ಮೆದಿಕೇರಿ